Thursday, December 23, 2010

ಸಂತಸದ ಕ್ಷಣ ...

ಬಡ್ತಿ ಸಿಕ್ಕಿತು ಎನಗೆ ನೀ ಮಡದಿಯಾಗೆ
ಕೈ ಹಿಡಿದೆ ನೀನು ಮನಕೆ ಸಂತಸ ತಂದೆ
ಮದುರ ಕ್ಷಣವದು ಬೆರೆತಂತೆ ಹಾಲು ಜೇನು
ತನುಮನದ ರೋಮಾಂಚನ ಅರಿಯದಾದೆನು

ಕಳೆದಿದೆ ವರುಷ ತುಂಬಿ ಮನೆಮನದಲ್ಲಿ ಹರುಷ

ಒಮ್ಮೆ ಕೇಳಿದ್ದೆ ನಿನಗೆ ಕೊಡುವೆಯೆನನ್ನು
ಮೊದಲ ವರ್ಷಕ್ಕೆ ಮರೆಯದ ಕೊಡುಗೆ ...
ನಗುತ ನೀ ಹೇಳಿದೆಯನಗೆ ಕರೆದೊಯ್ಯುವೆ
ಇನ್ನೊಂದು ಬಡ್ತಿಯೆಡೆಗೆ..

ಸಂತಸದ ಕ್ಷಣವಿದು ನಾಮರೆಯೆ ಎಂದು
ಮೀಸೆ ತಿರುವುತ ಹೇಳುತಿಹೆ
ಗಂಡು ಮಗುವಿನ ತಂದೆ ನಾನಿಂದು..

ಸುಖ ಶಾಂತಿ ಅಭಿವೃದ್ಧಿ ನಮ್ಮದಾಗಿರಲಿ
ಭಗವಂತನ ದಯೆ ಎಂದೆಂದು ಹೀಗೆ ಇರಲಿ !!!!!

ಸುಮಾರು ೩ ತಿಂಗಳಿನಿಂದ ಬ್ಲಾಗ್ ಲೋಕಕ್ಕೆ ಬಂದಿರಲಿಲ್ಲ. ಈಗ ಈ ಕುಶಿಯ ಕ್ಷಣವನ್ನು ನಿಮ್ಮೊಡನೆ ಹಂಚಿಕೂಳ್ಳಬೇಕೆನಿಸಿತು
ಅದಕ್ಕೆ ಸುಮ್ಮನೆ ಮನಸ್ಸಿಗೆ ಬಂದ ಶಬ್ದಗಳನ್ನು ಪ್ರಯೋಗಿಸಿ ಕುಶಿಯನ್ನು ಹಂಚಿಕೊಂಡಿದ್ದೇನೆ. ನಿಮ್ಮೆಲ್ಲರ ಹಾರೈಕೆ
ಆಶೀರ್ವಾದ ಸದಾ ನಮ್ಮೊಂದಿಗಿರಲಿ :).

ಸಂತಸದ ಕ್ಷಣವನ್ನು ಅನುಭವಿಸಲು ಮತ್ತೆ ಬ್ಲಾಗ ಲೋಕದಿಂದ ಸ್ವಲ್ಪ ದಿನ ದೂರವಾಗುತ್ತಿದ್ದೇನೆ.
ಮತ್ತಷ್ಟು ವಿಷಯಗಳೊಡನೆ ಮರಳಿ ಅಪ್ಪಳಿಸುವೆ .. ಅಲ್ಲಿವರೆಗೆ ..............



!!! ಹೊಸ ವರುಷದ ಶುಭಾಶಯಗಳು!!!

Sunday, September 5, 2010

ತೋಟದಲ್ಲೊಂದು ಸುತ್ತು

ಬಹಳ ತಿಂಗಳುಗಳ ನಂತರ ಬೇಸಿಗೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದೆ ... ಮಾವನ ಮಗಳ ಮದುವೆ ಇತ್ತು .. ಒಂದು ದಿನ ಮೊದಲೇ ಹೋಗಿದ್ದರಿಂದ ಬಹಳ ನೆಂಟರು ಇನ್ನು ಬಂದಿರಲಿಲ್ಲ.. ಯಾಕೋ ಬಹಳ ಬೇಜಾರು ಬರುತ್ತಿತ್ತು ... ಅದಕ್ಕೆ ತೋಟಕ್ಕೆ, ಬೆಟ್ಟಕ್ಕೆ ಒಂದು ಸುತ್ತು ಹೋಗಿ ಬರೋಣವೆಂದು ನಾನು ಮತ್ತು ನನ್ನ ಕಸಿನ್ ಕ್ಯಾಮರಾ ಹಿಡಿದು ಹೊರಟೆವು ...

ಕೆಲವೊಂದು ಕ್ಲಿಕ್ಸ್ ಇಲ್ಲಿವೆ ....

ಕೂಗಿ ಕರೆದರೆನಗೆ ಕೋಕೊ ..
ಸಾಗಿ ಹೋದರು ನೀಡಿ ಕೊಕ್



ಕೋಕೊ ಕಾಯಿ ... ಮುಂಚೆ ಹಲವಾರು ತೋಟಗಳಲ್ಲಿ ಹೇರಳವಾಗಿ ಕಾಣುತ್ತಿದ್ದ ಇದು ಈಗ ಬಹಳ ವಿರಳವಾಗಿದೆ ... ಅಲ್ಲೊ ಇಲ್ಲೊ ಒಂದೆರಡು ಮನೆಯ ತೋಟಗಳಲ್ಲಿ ಕಂಡು ಬರುತ್ತದೆ ...ಮಾರ್ಕೆಟನಲ್ಲಿ ಇದರ ಬೇಡಿಕೆ ಕಮ್ಮಿ ಆಗಿದೆ ಮತ್ತು ಇದನ್ನು ಪ್ರೊಸೆಸ್ ಮಾಡಿ ಮಾರುವುದು ಕಷ್ಟ ಆದ್ದರಿಂದ ಬೆಳೆಯುತ್ತಿಲ್ಲ ಎಂದು ನನ್ನ ಮಾವನನ್ನು ಕೇಳಿದಾಗ ತಿಳಿಯಿತು ..





ಮರ ಅಣಬೆ ...

ನೆಲ ಬಿರಿದು ಮೇಲೆರಿ ,,,





ಕಾಫಿ ಹಣ್ಣು

ಈ ಹಣ್ಣು ನೋಡಲು ಕೆಂಪು,,
ಒಣಗಿಸಿದರೆ ನೀಡುವುದು ಕಂಪು ...
ಪುಡಿ ಮಾಡಿ ಕುಡಿದರೆ ..ಮನಸ್ಸಿಗೆ ತಂಪು ..





ನೀರ‍ ಗುಳ್ಳೆಯಲ್ಲವಿದು ... ಹೊಳೆವ ಮುತ್ತು ...
ತೇಲುತಿಹುದೆಲೆಯ ಮೇಲೆ .. ಇದು ಯಾರ ಸೊತ್ತು



ಎಳೆಯ ಮೈ ,, ಬಿರಿಬಿಸಿಲು ..
ಹೋಗದಿರಲೆನ್ನ ಉಸಿರು .,ಆಗ ಬೇಕಿದೆ ನಾನಿನ್ನು ಹಸಿರು ..



ಮೀಸೆಯನೆತ್ತಿ ,,



ಚುಂಬಿಸುವ ತವಕದಿ ಗಗನವ ,,,




ಯಾವುದೀ ಕಿರೀಟ



ಬಾಗಿದೆ ಎನ್ನ ಸೊಂಟ ,, ತುಂಬಿ ಹಲಸ , ಕಾಲಿಂದ ತಲೆ ಗುಂಟ ..



ರಸ್ತೆಯ ಬದಿಯಲ್ಲಿ ಕೂತು .. ತೋರುತಿಹುದೆನನ್ನು ಈ ಮರದ ತೂತು ,,,




ಸಾಗುತಾ ದೂರ ದೂರ ..

Thursday, August 26, 2010

ಅಪರೂಪದ ಫೋಟೊ

ಇದೊಂದು ಮಿಂಚಂಚೆಯಲ್ಲಿ ಬಂದ ಫೋಟೊ .. ಮೂಲ ಛಾಯಚಿತ್ರಕಾರ ಯಾರು ಎಂದು ತಿಳಿಯದು .. ಆದ್ದರಿಂದ all credit goes to original photographer ... ನಾನು ಕೇವಲ ಇದನ್ನು ಎಲ್ಲರೊಡನೆ ಹಂಚಿಕೂಳ್ಳ ಬೇಕೆನಿಸಿತು ಅದಿಕ್ಕೆ ಬ್ಲೊಗನಲ್ಲಿ ಹಾಕಿದ್ದೇನೆ ..



ಚಿತ್ರಕೃಪೆ :ಮಿಂಚಂಚೆ .. ಅಂತರ್ಜಾಲದಲ್ಲೂ ಸಹ ಇದೆ .. [ click on the photo to see it in large scale ]


ಇದರಲ್ಲಿ ಎಲ್ಲರನ್ನೂ ನಾನು ಗುರುತಿಸಲು ಆಗಲಿಲ್ಲ .. ಬಲ್ಲವರು ತಿಳಿಸುವೀರಾ ...

ಎಡದಿಂದ ಬಲ :

೧: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ
೨. ಶ್ರೀ ವಿ ಕೃ ಗೋಕಾಕ್ ಅಥವಾ ಶ್ರೀ ಡಿ.ವಿ.ಗುಂಡಪ್ಪ
೩. ಶ್ರೀ ಕು.ವೆಂ.ಪು
೪. ಶ್ರೀ
೫. ಶ್ರೀ ಶಿವರಾಮ ಕಾರಂತ
೬. ಶ್ರೀ
೭. ಶ್ರೀ ಜಿ.ಪಿ.ರಾಜರತ್ನಮ್



[ ಈ ಛಾಯಾಚಿತ್ರದ ಹೆಚ್ಚಿನ ಮಾಹಿತಿಗಾಗಿ ಸುಶ್ರುತನ ಕಮೆಂಟ್ಸ ನೋಡಿ ...]

Monday, August 23, 2010

ಭೇಟಿ

ನಿನ್ನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರೂ ತಮ್ಮ ಬ್ಲೊಗನಲ್ಲಿ ತಮ್ಮ ಅನುಭವಗಳನ್ನು ಬರೆದೆ ಬರೆಯುತ್ತಾರೆ.
ನಾನೇನು ಬೇರೆ ವಿಶೇಷವಾಗಿ ಬರೆಯುತ್ತಿಲ್ಲ ಬಿಡಿ. ಅದೆ ಸುದ್ದಿ ಆದರೆ ಅಪೂರ್ಣ , ಯಾಕಂತೀರ ... ಕಾರಣಾಂತರಗಳಿಂದ ನಾನು ಕಾರ್ಯಕ್ರಮವನ್ನು ಪೂರ್ಣ ನೋಡಲಾಗಲಿಲ್ಲ. ಮನೆಗೆ ನೆಂಟರು ಬಂದಿದ್ದರಿಂದ ಮಡದಿಯ ಕರೆಗೆ ಓಗೊಟ್ಟು ಮಧ್ಯದಲ್ಲೆ ಹೊರಡಬೇಕಾಯ್ತು. ಎಷ್ಟೊಂದು ಕಾರ್ಯಕ್ರಮಗಳು , ಮನರಂಜನೆಗಳು ..ತಪ್ಪಿದವೋ ನಾನರಿಯೆ .. ಇನ್ಯಾರಾದರು ತಮ್ಮ ಬ್ಲೊಗನಲ್ಲಿ ಸಂಪೂರ್ಣ ವರದಿಯನ್ನು ಹಾಕಿದರೆ ಅದನ್ನು ಓದಿ ಬೇಸರಿಸುವ ಸರದಿ ನನ್ನದು. ಆದರೂ ಅಲ್ಲಿ ಇದ್ದಷ್ಟೇ ಸಮಯ ಮಾತ್ರ ಮರೆಯಲಸಾಧ್ಯ.

ಕನ್ನಡ ಭವನ ಹೊಕ್ಕುತ್ತಿದ್ದಂತೆ ಮೊದಲಿಗೆ ಸಿಕ್ಕಿದವರು ಪ್ರಕಾಶಣ್ಣ. ಅವರೇ ನನ್ನನ್ನು ಕರೆದೊಯ್ದು ಸೀತಾರಮ ಸರ್ ಮತ್ತೆ ಸುಮನಾ ಮೇಡಮ್ ಪರಿಚಯಮಾಡಿ ಕೊಟ್ಟರು. ಅಷ್ಟರಲ್ಲೆ ಶಿವಪ್ರಕಾಶ ಕೈ ಮಿಲಾಯಿಸಿ ತಮ್ಮನ್ನು ಪರಿಚಯಿಸಿ ಕೊಂಡರು.ಹಾಗೆಯೆ ನಂಜುಂಡ , ಚೇತನಾ ಭಟ್ಟ ಅವರ ಪರಿಚಯವಾಯಿತು. ಪುಸ್ತಕ ಬಿಡುಗಡೆಯ ಈ ಸಮಯದಲ್ಲೇ ತಾವು ಭಾರತಕ್ಕೆ ಬಂದಿರುವುದು ತುಂಬ ಖುಷಿಯಾಗ್ತ ಇದೆ, ಎಲ್ಲರನ್ನು ಬೇಟಿ ಮಾಡುವ ಅವಕಾಶ ಸಿಕ್ತು ಅಂತ ನಂಜುಂಡರವರು ಹೇಳಿದರು.

ಆಮೇಲೆ ಒಂದಿಷ್ಟು ಹರೆಟೆ .. ಫೊಟೊ .. ಬಿಸಿ ಬಿಸಿ ಕಾಪಿ ...

ಅತ್ತಿತ್ತ ಸುತ್ತುತ್ತ ಪರಿಚಯದ ಮುಖಗಳನ್ನು ಹುಡುಕುತ್ತಿದ್ದಾಗ ಕಂಡಿದ್ದು ಪ್ರಗತಿ ಹೆಗಡೆ ಮತ್ತಿ ದಿಲೀಪ ಹೆಗಡೆ [ ನವ ದಂಪತಿಗಳು] ,ಮದುವೆಗೆ ಹೋಗಿರಲಿಲ್ಲ ಹಾಗಾಗಿ ಇಲ್ಲಿ ಬೇಟಿ ಮಾಡಿ ಶುಭ ಹಾರೈಸುವ ಸಂದರ್ಭ ಒದಗಿ ಬಂತು. ಇಷ್ಟೊತ್ತಾದರು ಕಾರ್ಯಕ್ರಮದ ಮುಖ್ಯ ಮುಖಗಳಾದ ಆಜಾದ ಸರ್ ಹಾಗೂ ಶಿವು ಸರ್ ಕಂಡು ಬರಲಿಲ್ಲ. ಛಲ ಬಿಡದೆ ಹುಡುಕಿ ಕೈ ಮಿಲಾಯಿಸಿ , ಶುಭಾಶಯಗಳನ್ನು ತಿಳಿಸಿ ಹೊರಬಂದರೆ ಎದುರಿಗೆ ಕಂಡಿದ್ದು ವಿ.ಆರ್ ಭಟ್ಟ ಸರ್ ..ಅವರೊಡನೆ ಸ್ವಲ್ಪ ಮಾತುಕಥೆ. ನಂತರ ನಾರಾಯಣ ಭಟ್ಟ , ನಾಗರಾಜ ,ನವೀನ , ಮಲ್ಲಿಕಾರ್ಜುನ ಮತ್ತೂ ಹಲವರ ಮುಖ ಬೇಟಿ ,ಪರಿಚಯವಾಯ್ತು.

ಕಾರ್ಯಕ್ರಮ ಪ್ರಾರಂಭವಾಗುವುದೆಂದು ಒಳಗೆ ಹೋದಾಗ ..ಮೂರ್ತಿ ಸರ್ ಮತ್ತು ನಾರಾಯಣ ಭಟ್ಟ ಅವರು ನನ್ನ ಪಕ್ಕದಲ್ಲೆ ಕುಳಿತರು. ಈ ಅವಕಾಶ ಬಿಡೋದೆ .. ನಾನೆ ಖುದ್ದಾಗಿ ಅವರನ್ನು ಮಾತನಾಡಿಸಿದೆ .. ಪರಿಚಯ ಹೇಳಿಕೊಂಡೆ.. ಮಾತನಾಡಿ ತುಂಬ ಖುಷಿಯಾಯ್ತು .. ಕೆಲವೊಂದು ಅನುಭವದ ಮಾತುಗಳನ್ನು ಹೇಳಿದರು. ಆಮೇಲೆ ದಿನಕರ ಮೊಗೇರ ಅವರನ್ನು ಬೇಟಿ ಮಾಡಲು ಮತ್ತೆ ಹೊರಗಡೆ ಹೋದೆವು. ಪತ್ನಿ ಸಮೇತರಾಗಿ ಆಗಮಿಸಿದ ದಿನಕರ ಅವರ ಬಳಿ ಸಾಗಿ ಕುಶಲೋಪಚರಿಗಳಾದ ಮೇಲೆ ನನ್ನ ಮತ್ತು ಭಟ್ಕಳದ ಬಾಂಧವ್ಯದ ನೆನಪುಗಳನ್ನು ಮಾತಾಡಿ ತಾಜಾ ಮಾಡಿಕೊಂಡೆ.

ಮತ್ತೆ ಒಳ ಬರುವಷ್ಟರಲ್ಲಿ ನಾವು ಮೊದಲು ಕುಳಿತ ಸ್ಥಳವನ್ನಾಗಲೇ ಬೇರೆಯವರು ಆಕ್ರಮಿಸಿದ್ದರು . ಸಭಾಂಗಣ ತುಂಬಿ ಹೋಗಿತ್ತು , ಜನಗಳು ಇನ್ನು ಬರುತ್ತಲೇ ಇದ್ದರು.ಅಲ್ಲೆ ಒಂದು ಸ್ಥಳ ಹುಡುಕಿ ಕುಳಿತೆ. ಎದುರಿಗೆ ಕಂಡಿದ್ದು ಸುಶ್ರುತ ಮತ್ತು ಗೌತಮ್ ..ಅವರನ್ನು ಮಾತನಾಡಿಸುವಷ್ಟರಲ್ಲಿ ಕಾರ್ಯಕ್ರಮ ಪ್ರಾರಂಭವಾಗಿತ್ತು ..ನನ್ನ ಕ್ಯಾಮರಾಕ್ಕೆ ಸ್ವಲ್ಪ ಕೆಲಸ ಕೊಡೋಣವೆಂದು ನಾನು ಸ್ಟೆಜ ಹತ್ತಿರ ಹೋದೆ .. ಅಲ್ಲಿ ಬಾಲು ಸರ್ ಮತ್ತು ಪ್ರವೀಣರವರ ಬೇಟಿ ಆಯಿತು.

ಒಂದೆರಡು ಫೊಟೊ ಕ್ಲಿಕ್ಕಿಸಿದೆ .. ವಾಣಿ ಕೂಗತೊಡಗಿತ್ತು ...ಮನೆಗೆ ಬರುವಂತೆ ಕರೆ ಬಂದಿತ್ತು ...ಇನ್ನು ಹಲವರನ್ನು ಬೇಟಿ ಮಾಡುವುದಿತ್ತು ... ಕಾರ್ಯಕ್ರಮವನ್ನು ಬಿಟ್ಟು ಮನೆಯ ಕಡೆ ಹೊರಟಿದ್ದೆ ... ಮುಂದಿನ ಬಾರಿ ಸ್ವಲ್ಪ ಸಮಯ ಇಟ್ಟು ಕೊಂಡು ಬಂದು ಎಲ್ಲರ ಪರಿಚಯ ಮಾಡಿಕೊಳ್ಳಬೇಕು.

ಹೊರಡುವ ಮುನ್ನ ಪುಸ್ತಕವನ್ನು ಕೊಳ್ಳುವುದನ್ನು ಮರೆಯಲಿಲ್ಲ. ಅಷ್ಟೆ ಅಲ್ಲ ಪ್ರವೀಣ ಅವರ ಸಹಾಯದಿಂದ ಲೇಖಕರ ಹಸ್ತಾಕ್ಷರ ಸಹ ಪಡೆದು ಕೊಂಡೆ ನಾನು ಹೊರ‍ಟಿದ್ದು.ಬಂದಿದ್ದಕ್ಕೆ ಇಷ್ಟಾದರು ಸಂತೋಷ ಪಡುವಂತಾಯಿತು.

ಫೊಟೊಗಳನ್ನು ಇನ್ನು ಕಂಪ್ಯೂಟರ್ ಗೆ ಟ್ರಾನ್ಸ್ಪರ ಮಾಡಲಾಗದ್ದರಿಂದ ಇಲ್ಲಿ ಹಾಕುತ್ತಿಲ್ಲ ,,ಸಾಧ್ಯವಾದಲ್ಲಿ ಇಂದು ಸಂಜೆಯೆ ಅಪ್ಲೋಡ್ ಮಾಡುತ್ತೇನೆ.

Friday, July 30, 2010

ಕನ್ನಡ ಜಾಗೃತಿಗೊಂದು ಪ್ರಯತ್ನ- ಅಂಗಡಿಯಲ್ಲಿ ಕನ್ನಡ ನುಡಿ.

ಇಂದು ಮಧ್ಯಾನ ಊಟ ಮುಗಿಸಿ ಬರುತ್ತಿರುವಾಗ ನನ್ನ ಮೇನೆಜರ್ "ಶ್ರೀಧರ ಇಲ್ಲಿ ಬನ್ರಿ , ನಿಮ್ಗೆನೋ ಕೊಡ್ಬೇಕು " ಅಂದ್ರು ..
ಅರೆ ಇದೆನಪ್ಪ .. ಎನಾದರು ಒಳ್ಳೆ ಸುದ್ದಿ ಇದ್ಯ ಅಂತ ಹೋದ್ರೆ ಒಂದು ಪುಸ್ತಕ ಕೈಗೆ ಹಿಡ್ಸಿದ್ರು ..
ಬರಿ ಪುಸ್ತಕಾನಾ ಅಂತ ನಿರಾಸೆ ಆಗಿಲ್ಲ ಯಾಕೆ ಗೊತ್ತ ಅವರು ಕೊಟ್ಟಿದ್ದು ಒಂದು ಕನ್ನಡದ ಪುಸ್ತಕ.

ಕೆಲಸದ ಮಧ್ಯೆಯೆ ಬಿಡುವು ಮಾಡಿಕೊಂಡು ಪುಸ್ಕವನ್ನು ಓದಿ ಮುಗಿಸಿದೆ ..ಇಷ್ಟವಾಯ್ತು .. ಎಲ್ಲರಿಗೂ ತಿಳಿಸೋಣ ಅನ್ನಿಸ್ತು ..
ಕೆಲವರಿಗೆ ಇದರ ಬಗ್ಗೆ ಈಗಾಗಲೇ ತಿಳಿದಿರಬಹುದು ..

ಪುಸ್ತಕ ವಿವರಣೆ ಹೀಗಿದೆ ..

ಹೆಸರು: ಅಂಗಡಿಯಲ್ಲಿ ಕನ್ನಡ ನುಡಿ ..
ಬರೆದವರು: ರೋಹಿತ್ ಬಿ ಆರ್
ಪ್ರಕಾಶನ ಮತ್ತು ಹಕ್ಕುಗಳು: ಬನವಾಸಿ ಬಳಗ , ಟಾಟಾ ಸಿಲ್ಕ್ ಫಾರ್ಮ್ , ಬೆಂಗಳೂರು.
ಪುಟಗಳು:೫೬

ಹೇಸರೆ ಹೆಳುವಂತೆ ಈ ಪುಸ್ತಕ ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿಗತಿಗಳ ಬಗ್ಗೆ ತಿಳಿಸಿತ್ತದೆ .. ಜೊತೆಗೆ ಪರಿಹಾರವು ಇದೆ ..

ಮುನ್ನುಡಿಯಲ್ಲಿ ಹೇಳಿರುವಂತೆ ಕನ್ನಡಿಗರಲ್ಲಿ ತುರ್ತಾಗಿ ಜಾಗೃತಿ ಆಗಬೇಕಾದ ಕ್ಷೇತ್ರಗಳತ್ತ ಕಣ್ಣು ಹಾಯಿಸಿದರೆ ಕಾಣಿಸುತ್ತಿರುವುದು ಮಾರುಕಟ್ಟೆಯಲ್ಲಿ ಗ್ರಾಹಕರ ಸೇವೆಯಲ್ಲಿನ ಕನ್ನಡದ ಬಳಕೆಯ ಕುಂದುಕೊರತೆಗಳು.

ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಹೊತ್ತಿಗೆ ಸಹಾಯವಾಣಿಯಾಗಿ ಕೆಲಸ ಮಾಡುತ್ತದೆ. ಇಲ್ಲಿ ಹೊತ್ತಿಗೆಯಲ್ಲಿ ಅದಿಲ್ಲ , ಇದಿಲ್ಲ ಎಂದು ಗೋಳಿಡುವ ವಿಚಾರಗಳು ಇಲ್ಲ .. ಇವರು ಹೇಳುವುದು ಎನೇಂದರೆ ನಮ್ಮ ನಾಡಿನಲ್ಲೇ ನಮ್ಮ ಹಕ್ಕುಗಳಿಂದ ಕನಡಿಗರನ್ನು ಹೇಗೆ ವಂಚಿಸಲಾಗಿತ್ತಿದೆ ಎಂದು. ಕೆಲವು ವ್ಯಂಗ ಚಿತ್ರಗಳ ಮೂಲಕ , ಲಘು ಬರಹಗಳ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ.
ನಮ್ಮ ನಾಡಿನಲ್ಲಿ ಅದು ಸಿಗುತ್ತಿಲ್ಲ , ಇದು ಸಿಗುತ್ತಿಲ್ಲ ಎಂದು ಅಲವತ್ತು ಕೊಳ್ಳುವುದರ ಬದಲು ಮಾರುಕಟ್ಟೆಯಲ್ಲಿ , ನಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡದ ಹಕ್ಕೊತ್ತಾಯಕ್ಕೆ ಮುಂದಾಗೋಣ ಎನ್ನುವುದು ಇಲ್ಲಿನ ಧ್ಯೇಯವಾಗಿದೆ.
ಎಲ್ಲವು ಕನ್ನಡವೇ ಆಗಬೇಕೆಂದಲ್ಲ .. ಮುಖ್ಯವಾಗಿ ತಿಳಿಸುತ್ತಿರುವುದು ಸಾಮಾನ್ಯವಾದ ವಿಷಯಗಳಲ್ಲಿ .. ವ್ಯವಹಾರದಲ್ಲಿ ಕನ್ನಡವಿರಲಿ ಎಂಬುದು ಈ ಹೊತ್ತಿಗೆಯ ಉದ್ದೇಶವಾಗಿದೆ ..


ಕೆಲವು ಉದಾಹರಣೆಗಳು :
-- ಸೂಚನೆ ಹಾಗು ಸುರಕ್ಷತಾ ಮಾಹಿತಿಗಳು ಕನ್ನಡದಲ್ಲಿರಲಿ .. [ ಆಸ್ಪತ್ರೆ ಸೂಚೆನೆಗಳು , ತರೆವಾರಿ ದೈನಂದಿನ ಬಳಕೆಯ ವಸ್ತುಗಳು , ಅಡಿಗೆ ಅನಿಲ್ , ರೈಲ್ವೆ ಸೂಚನೆ ..ಸಾರಿಗೆ ಸೂಚನೆ.. ಹೀಗೆ ಹಲವು ಕಡೆ ಕನ್ನಡದ ಮಾಹಿತಿ ಸಾಮಾನ್ಯರಿಗೆ ಅಗತ್ಯ]
-- ಸಂಚಾರಿ ವ್ಯವಸ್ಥೆಯಲ್ಲಿ , ದೊಡ್ಡ ದಿನಸಿ ಸಂಕೀರ್ಣಗಳಲ್ಲಿ ದಿನಸಿ ಪದಾರ್ಥಗಳ ಹೆಸರು .. ಮಾಲ್ ಗಳಲ್ಲಿ ..ಚಿತ್ರ ಮಂದಿರದಲ್ಲಿ ಹೀಗೆ ಅನೇಕ ಕಡೆ ಕನ್ನಡದ ಅಗತ್ಯವಿದೆ ಎಂಬುದನ್ನ ಇಲ್ಲಿ ಚೆನ್ನಾಗಿ ವಿವರಿಸಲಾಗಿದೆ ..

ಕರ್ನಾಟಕದಲ್ಲಿ ಬರಿ ಕನ್ನಡಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ವ್ಯಾಪಾರ ವಹಿವಾಟು ಸಲೀಸಾಗಿ ಪೂರೈಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಹೇಳಲಾಗಿದೆ ..

ಪುಸ್ತಕದ ಕೊನೆಯಲ್ಲಿ ಬರೆದಿರುವ ಆಶಯ ವಾಖ್ಯ ಇಷ್ಟವಾಯ್ತು ,,

" ಈ ಹೊತ್ತಿಗೆ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಎನ್ನುವುದು ಬಳಗದ ಆಶಯ.
ಓದಿರಿ , ಜಾರಿಗೆ ತನ್ನಿ ,ಬದಲಾವಣೆಗೆ ಕಾರಣರಾಗಿ "

ನನ್ನ ಅನಿಸಿಕೆ ಎನೆಂದರೆ .. ನಿಜ ಹಲವು ಕಡೆ ಕನ್ನಡದ ಪರಿಸ್ಥಿತಿ ಚಿಂತಾಜನಕವಾಗಿದೆ ಹಾಗಂತ ಎಲ್ಲವನ್ನು ಬದಲಾಯಿಸುವುದು ಸಾಧ್ಯವಿಲ್ಲ ... ಪುಸ್ತಕದಲ್ಲಿ ಹೇಳಿರುವ ಎಲ್ಲ ವಿಷಯ , ಸ್ಥಳಗಳಲ್ಲಿ ಅಲ್ಲವಾದರು ..ಕೆಲವು ಕಡೆ ಕನ್ನಡ ಜಾಗೃತಿಯನ್ನು ಮೂಡುಸುವುದು ಅವಶ್ಯವಾಗಿದೆ. ಎಲ್ಲರೂ ಧ್ವನಿಗೂಡಿಸಿದರೆ ಇದು ಖಂಡಿತ ಸಾಧ್ಯ.

ಕೈಗೂಡಿಸ ಬಯಸುವುದಾದರೆ ಇಲ್ಲಿಗೆ ಬರೆಯಿರಿ ..
" jaagruta_graahakaru-subscribe@googlegroups.com "

ಹಲವರು ದೇಣಿಗೆ ನೀಡುವ ಮೂಲಕ ಹೊತ್ತಿಗೆ ಅಚ್ಚು ಹಾಕಿಸಲು ನೆರವಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಶ್ರೀ ಆನಂದ .ಜಿ ಅವರು ಮುನ್ನುಡಿಯಲ್ಲಿ ತಿಳಿಸಿದ್ದಾರೆ.[ anand@banavaasibalaga.org]

ಈ ಪುಸ್ತಕ , ಪುಸ್ತಕ ಮಳಿಗೆಗಳಲ್ಲಿ ಸಿಗವುದು ಇಲ್ಲವೋ ಎಂಬ ಮಾಹಿತಿ ಖಚಿತವಿಲ್ಲ ..
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಸಂಪರ್ಕಿಸ ಬಹುದೇನೊ

www.banavaasibalaga.org

kacheri@banavasibalaga.org

ಬಳಗದ ಬ್ಲೋಗ್
enguru.blogspot.com
karnatique.blogspot.com

ಮಾಹಿತಿಗಾಗಿ : http://enguru.blogspot.com/2010/05/angadiyalli-kannada-nudi.html

ಕನ್ನಡದ ಏಳಿಗೆಗಾಗಿ ನನ್ನದೂ ಒಂದು ಚಿಕ್ಕ ಪ್ರಯತ್ನವಷ್ಟೇ ... ಪುಸ್ತಕವನ್ನು ಪಡೆದು ಓದಿ .. ನಾವು ಸಹಕರಿಸೋಣ ..ಎನಂತೀರಿ ...

Monday, July 26, 2010

ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ



ಮಳೆಗಾಲ ಬಂತೆಂದರೆ ನಮ್ಮೂರಲ್ಲಿ , ಊರಿನ ಸುತ್ತಮುತ್ತ ಎಲ್ಲರೂ ಒಂದೊಂದು ರೀತಿಯ ಚಟುವಟಿಕೆಗಳಲ್ಲಿ ತೊಡಗಿ ಬಿಡುತ್ತಾರೆ. ಮಕ್ಕಳಿಗೆ ಶಾಲೆಗೆ ಹೋಗೊ ತಯಾರಿ, ಆಳುಗಳಿಗೆ ತೋಟ ಗದ್ದೆಯ ಕೆಲಸ, ತೋಟ ಇರುವವರ ಮನೆ ಗಂಡಸರು ಅಡಿಕೆಗೆ ಕೊಳೆ ಬಾರದಿರಲೆಂಬಂತೆ ಔಷಧಿಯನ್ನು ಹೊಡೆಯುವ ತಯಾರಿ ನಡೆಸುತ್ತಿರುತ್ತಾರೆ, ವಯಸ್ಸಾದವರು ತಮ್ಮದೆ ಲೋಕದಲ್ಲಿ , ಒಟ್ಟಿನಲ್ಲಿ ಎಲ್ಲರೂ ಎನೇನೊ ಮಾಡ್ತಾ ಇರ್ತಾರೆ ಆದರೆ ಹೆಂಗಸರು ಮಾತ್ರ ವರ್ಷವಿಡಿ ತಾವು ಕೂಡಿಟ್ಟ ಹಣ ಎಷ್ಟಾಗಿದೆ ಅಂತಾ ಎಣಿಸ್ತಾ ಇರ್ತಾರೆ. ಈ ಹಣವಾದರು ಸುಮ್ಮನೆ ಬಂದಿದ್ದಲ್ಲ, ತವರಿಂದ ಬಂದ ಅಣ್ಣ ಕೊಟ್ಟಿದ್ದೊ , ದೂರದೂರಲ್ಲಿ ಇರುವ ಮಗ ಮನೆಗೆ ಬಂದಾಗ ಕೊಟ್ಟಿ ಹೋಗಿದ್ದೊ ಅಥವಾ ಗಂಡನ ಬಟ್ಟೆ ಒಗೆಯುವಾಗ ಸಿಕ್ಕ ಚಿಲ್ಲರೆ ಕಾಸುಗಳು ಹಾಗು ಹಾಲು,ತುಪ್ಪಾ ಮಾರಿ ಉಳಿಸಿದಂತ ದುಡ್ಡು ಅದು.

ಹೆಂಗಸರ ಈ ಹರ ಸಾಹಸ ಯಾಕೆ ಅಂತೀರಾ , ಪ್ರತಿ ವರ್ಷ ಮಳೆಗಾಲದಲ್ಲಿ ನಮ್ಮೂರಲ್ಲಿ ಭಾರಿ ಡಿಸ್ಕೌಂಟ್ ಮಾರಾಟ ಇರುತ್ತೆ ಕಣ್ರಿ ...

ರೇಷ್ಮೆ ಸೀರೆಯಿಂದ ಹಿಡಿದು ಚಿಕ್ಕ ಚಿಕ್ಕ ಆದರೆ ಅತ್ಯವಶ್ಯಕ ಒಳ ಉಡುಪುಗಳವರೆಗೂ ಬಾರಿ ಡಿಸ್ಕೌಂಟ್ .. ಅಷ್ಟೆ ಅಲ್ಲ ಕರ್ಚೀಪ್ ಗೆ ಸಹ ಡಿಸ್ಕೌಂಟ್ ಕೊಡ್ತಾರೆ!!!!. ನಮ್ಮೂರ ಹೆಂಗಸ್ರಿಗೂ [ ಕೆಲವು ಗಂಡಸರು/ಮಕ್ಕಳಿಗು ಸಹ] ಅದೇನು ಡಿಸ್ಕೌಂಟ್ ಮೋಹನೊ , ಬೇಸಿಗೆಯಲ್ಲಿ ಮಗ/ಮಗಳು ಎನಾದರು ವಸ್ತ್ರ ಬೇಕು ಅಂತಾ ಹಟ ಮಾಡಿದ್ರೆ ,
" ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ" ಅನ್ನೋರೆ ಹೆಚ್ಚು.

ಯಾವತ್ತು ಮನೆಗೆ ಪೇಪರ್ ಬಂದಿದ್ಯ ಇಲ್ವ ಅಂತ ತಿಳಿಯುವ ಉಸಾಬರಿಗೆ ಹೋಗದ ಹೆಂಡ್ತಿ .. ಪದೆ ಪದೆ ಪೇಪರ್ ಬಗ್ಗೆ ಕೆಳ್ತಾ ಇದ್ರೆ ಗಂಡನ ಜೇಬಿಗೆ ಕತ್ರಿ ಬಿತ್ತು ಅಂತಾನೆ ಅರ್ಥ. ಪ್ರಾದೇಶಿಕ ಪೇಪರನಲ್ಲಿ ಯಾವ ಯಾವ ಅಂಗಡಿಯಲ್ಲಿ ಡಿಸ್ಕೌಂಟ ಮಾರಾಟ ಪ್ರಾರಂಭವಾಗಿದೆ ಅಂತ ಹಾಕಿರ್ತಾರೆ ಅದಕ್ಕೆ ಈ ಪರಿ ಕೇಳೊದು. ಮತ್ತೆ ಅಷ್ಟೂಂದು ದುಡ್ಡು ಕೂಡಿ ಹಾಕಿ ಗಂಡನ ಹತ್ರ ಯಾಕೆ ಕೇಳ್ತಾರೆ ಅಂತೀರ .. ಅದೆ ಕಣ್ರಿ ವಿಶೇಷ .. ಅವರು ಕೂಡಿಟ್ಟಿರೊದು ಗಂಡನಿಗೆ ಗೊತ್ತಿಲ್ಲದ ಹಾಗೆ, ಅಲ್ಲದೇ ಅದು ಸ್ಟಾಂಡ್ ಬೈ ಹಣ. ಗಂಡನಿಂದ ಪಡೆದ ಹಣ ಸಾಕಾಗದೆ ಇದ್ದಾಗ ಅಥವಾ ಕೇಳಿದರೆ ಮತ್ತೆ ಸಿಗೋಲ್ಲ ಅನ್ನುವಾಗ ಆ ಹಣ ಹೊರಗೆ ಬರೋದು.

ಪೇಟೆಗೆ ಹೋಗೊದು ಸುಮ್ನೆ ಆಗಲ್ಲ , ಬೆಳಿಗ್ಗೆ ಬೇಗನೆ ಎದ್ದು [ ದಿನಕ್ಕಿಂತ ಅರ್ಧ ಗಂಟೆ ಮುಂಚೆನೆ] , ಮನೆ ಕೆಲಸ ಮುಗ್ಸಿ..ತಿಂಡಿ ತಯಾರು ಮಾಡಿ, ವಯಸ್ಸಾದ ಅತ್ತೆ ಮಾವ ಇದ್ರೆ ಅಡಿಗೆನೂ ತಯಾರಿಸಿಟ್ಟು ,ಗಂಡನ ಮನವಲಿಸಿ ಸಾಧ್ಯ ಆದರೆ ಅವರನ್ನು ಕರೆದುಕೊಂಡು ಹೊರಡ ಬೇಕು ..ನೋಡಿ ಡಿಸ್ಕೌಂಟ್ ಗೆ ಹೊಗೋಕೆ ಎಷ್ಟೊಂದು ವಿಘ್ನ.

ಕೆಲವೊಮ್ಮೆ ಆಚೀಚೆ ಮನೆ ಹೆಂಗಸರೆಲ್ಲಾ ಸೇರಿ ಯಾವದಾದರು ಒಂದು ಜೀಪನ್ನು ಬಾಡಿಗೆಗೆ ಪಡೆದು ಒಟ್ಟಿಗೆ ಪೇಟೆಗೆ ಹೋಗಿ ಬರುವುದು ಇರುತ್ತೆ. ಕೆಲವೊಂದು ಮನೆಯಲ್ಲಿ ಇದಕ್ಕಾಗಿಯೆ ಸಣ್ಣ ಪುಟ್ಟ ಜಗಳವಾಗುವುದು ಇರುತ್ತದೆ. ಎಲ್ಲಾ ಗಂಡಸರು ಹೇಳುವ ಒಂದು ಸಾಮಾನ್ಯ ಮಾತು ಅಂದ್ರೆ " ಸುಮ್ನೆ ದುಡ್ಡು ಜಾಸ್ತಿ ಮಾಡಿ ಆಮೇಲೆ ಡಿಸ್ಕೌಂಟ ಅಂತ ಸ್ಟಿಕ್ಕರ್ ಅಂಟಿಸಿ ಮೋಸ ಮಾಡ್ತಾರೆ , ಅಲ್ಲದೆ ಅದೆಲ್ಲ ಹಳೆ ಶಿಲ್ಕು , ಖಾಲಿ ಮಾಡೊ ಪ್ಲಾನ ಅಷ್ಟೆ . ಅದರ ಬದಲು ನಿಧಾನವಾಗಿ ಆಮೇಲೆ ತಗೋಂಡ್ರೆ ಆಯಿತು ಅಂತ". ಆದರೆ ಹೆಂಗಸರು ಕೇಳ್ಬೇಕಲ್ವ . ಹೋಗ್ಬೇಕು ಅಂದ್ರೆ ಹೋಗ್ಲೆ ಬೇಕು.

ಆದರೆ ಡಿಸ್ಕೌಂಟನಲ್ಲಿ ಇರೋ ೭೦% ಬಟ್ಟೆ ಹಳೆ ಶಿಲ್ಕು ಅನ್ನೋದ್ರೆಲ್ಲಿ ಎರಡು ಮಾತಿಲ್ಲ. ಕೆಲವೊಬ್ಬರಿಗೆ ಒಳ್ಳೆ ಮಾಲು ಸಿಕ್ಕಿರುತ್ತೆ ಇನ್ನು ಕೆಲವೊಬ್ಬರಿಗೆ ಬಹಳ ಕೆಟ್ಟ ಮಾಲು ಸಿಗುವ ಸಾದ್ಯತೆಗಳು ಇರುತ್ತೆ , ಎಷ್ಟಪ್ಪ ಅಂದ್ರೆ ಒಮ್ಮೆ ನೀರಿಗೆ ಹಾಕಿದ್ರೆ ಮುಗಿತು ಮತ್ತೆ ಆ ವಸ್ತ್ರವನ್ನು ತೊಡೊ ಭಾಗ್ಯ ಗ್ಯಾಸ್ ಕಟ್ಟೆಗೊ , ಟಿ.ವಿ , ಪ್ರಿಡ್ಜಗಳಿಗೋ ಅಥವಾ ಕಿಡಕಿ ಬಾಗಿಲುಗಳಿಗೋ ಇರುತ್ತೆ :).

ಒಟ್ಟಿನಲ್ಲಿ ಮಳೆಯಲ್ಲಿ ನೆನೆಯುತ್ತ , ಮೈ ಎಲ್ಲ ಕೆಸರಾದರು ಸಹ ಮಳೆಗಾಲದಲ್ಲಿ ಒಮ್ಮೆ ಆದರು ಡಿಸ್ಕೌಂಟಗೆ ಅಂತ ಪೇಟೆಗೆ ಹೋಗಿ ಬರದಿದ್ದರೆ ನಮ್ಮ ಕಡೆಯವರಿಗೆ ಎನೋ ಒಂದನ್ನ ಕಳೆದು ಕೊಂಡಂತೆ. ಕೆಲವೊಂದು ಮಳೆಗಾಲದ ಖಾದ್ಯಗಳನ್ನಾದರು ಬಿಟ್ಟಾರು . ಈ ಡಿಸ್ಕೌಂಟ ಬಿಡಲೊಲ್ಲರು ....

ನಾವೇನು ಬೆಂಗಳೂರಲ್ಲಿ ಕಮ್ಮಿನೇ ..ಯಾವ ಮಾಲ್ ನಲ್ಲಿ ಎಷ್ಟು ರಿಯಾಯಿತಿ ಅಂತ ತಿಳಿದು ಕೊಂಡು ತಾನೆ ಲಗ್ಗೆ ಹಾಕೋದು. ನಾವು ಖರ್ಚು ಮಾಡುವಷ್ಟು ಸಹ
ಊರಲ್ಲಿ ಯಾರು ಮಾಡೋಲ್ಲ ಅಲ್ವ.ಬೆಂಗಳೂರನಲ್ಲಿ ವರ್ಷವಿಡಿ ಡಿಸ್ಕೌಂಟ್ ಜಾತ್ರೆನೆ. ಅವರಿಗೋ ವರ್ಷಕ್ಕೆ ಒಂದೊ ಎರಡೊ ಮಾತ್ರ .. ಹೋಗ್ಲಿ ಬಿಡಿ , ಮಜಾ ಮಾಡ್ಲಿ :)

ಈ ಡಿಸ್ಕೌಂಟ್ ವಿಷ್ಯ ಬರೆಯ ಹತ್ತಿದರೆ ಒಂದು ಪುಸ್ತಕಾನೆ ಬರಿ ಬಹುದು ಅಷ್ಟು ಸಂಗತಿಗಳು ನೋಡಲು , ಕೇಳಲು ಸಿಗುತ್ತದೆ. ನಾನು ಈಗ ಬರೆದಿದ್ದು ಕೇವಲ ಪೇಟೆಗೆ ಹೋಗೊ ಮುನ್ನ ಆಗುವಂತ ಘಟನೆಗಳನ್ನು ಮಾತ್ರ . ಇಲ್ಲಿ ಬರೆದಿರೋದು ಕಮ್ಮಿನೆ. ಡಿಸ್ಕೌಂಟ ಖರೀದಿ , ಆಮೇಲೆ ಮನೆಗೆ ಬಂದ ನಂತರ ಆಚಿಚೆ ಮನೆಯವರೋಡನೆ ಸಂಭಾಷಣೆ ಹೀಗೆ ಇನ್ನು ಹಲವು ಸ್ವಾರಸ್ಯಕರ ಘಟನೆಗಳು ಇರುತ್ತವೆ. ಎಂದಾದರು ಪುರುಸೊತ್ತಿನಲ್ಲಿ ಅದರೆ ಬಗ್ಗೆ ಬರೆಯುತ್ತೇನೆ.

ವಿ.ಸೂ: ಇದೊಂದು ಕೇವಲ ಲಘು ಬರಹವಷ್ಟೆ .. ಯಾವುದೆ ವ್ಯಕ್ತಿ , ಸ್ಥಳಗಳನ್ನು ನಿಂದಿಸಲು ಬರೆದದ್ದಲ್ಲ. ಅಥವ ನಮ್ಮೂರ ಜನ ಹೀಗೆ ಅಂತ ತೋರಿಸುವದಕ್ಕೂ ಬರೆದದ್ದಲ್ಲ.ಸುಮ್ಮನೆ ತಮಾಷೆಗೆ ಬರೆದದ್ದು ಓದಿ ತಮಾಷೆ ಅನ್ನಿಸಿದರೆ ನಕ್ಕು ಬಿಡಿ , ಕಮೆಂಟನಲ್ಲಿ ನಾಲ್ಕು ಹೋಗಳಿಕೆನೋ , ತೆಗಳಿಕೆನೋ ಎನೋ ಒಂದನ್ನ ಗೀಚಿ :).

ಚಿತ್ರ ಕೃಪೆ : ಅಂತರ್ಜಾಲ

Tuesday, July 6, 2010

ಆತ್ಮ ಶುದ್ಧಿ

ತುಂಬ ಬೇಸರವಾದಾಗ ಅಥವ ಮನಸ್ಸಿಗೆ ಎನೋ ಹೊಸತನ ಬೇಕೆನಿಸಿದಾಗ .. ನಾನು ಕೆಲವೊಮ್ಮೆ ಮೊರೆ ಹೋಗುವುದು ಕನ್ನಡ ಪುಸ್ತಕಗಳೆಡೆಗೆ .ಹಲವು ಬಾರಿ ಡಿ.ವಿ.ಜಿ ಯವರ ಕಗ್ಗಕ್ಕೆ. ಅದೆನೋ ಡಿ.ವಿ.ಜಿ ಯವರ ಕಗ್ಗ ಓದುವುದೆಂದರೆ ನನಗೆ ಭಲು ಇಷ್ಟ. ಒಂದು ಕಗ್ಗವನ್ನು ಓದಿ , ಅರ್ಥವನ್ನು ಕಲ್ಪಿಸಿಕೊಂಡು [ ಪ್ರತಿಯೊಂದು ಕಗ್ಗದ ಭವಾರ್ಥವಿರುವ ಪುಸ್ತಕ ಕೂಡ ಇದೆ ] , ಈಗಿನ ದಿನಕ್ಕೆ ಕಗ್ಗದ ಭಾವವನು ಹೊಂದಿಸಿ ಮುದ ಹೊಂದುತ್ತಿರುತ್ತೇನೆ. ಕಗ್ಗದ ಭಾವಗಳು ಚಿರಸತ್ಯ ಮತ್ತು ನಿತ್ಯ ಸ್ಮರಣೀಯ.

ಮೊನ್ನೆ ಹೀಗೊಂದು ಘಟನೆ ನಡೆಯಿತು. ಕೆಲಸದಿಂದ ಬರುವಾಗ ಎನೋ ಒಂದು ತರದ ಕಳವಳ. ಕೆಲಸದ ಒತ್ತಡದಿಂದ ಹೀಗಾಯ್ತೊ ಅಥವ ಮತ್ತೆನೋ ಕಾರಣವೊ ನನಗೆ ತಿಳಿಯದಾಗಿತ್ತು ... ಮನೆಗೆ ಬಂದು ಕೈ ಕಾಲು ಮುಖ ತೊಳೆದು ಹೆಂಡತಿ ಕೊಟ್ಟ ಬಿಸಿ ಬಿಸಿ ಚಹದೊಂದಿಗೆ ಊರಿನಿಂದ ತಂದ ಹಲಸಿನಕಾಯಿ ಸಂಡಿಗೆಯನ್ನು ಮುಗಿಸಿ , ಮಡದಿಯೊಂದಿಗೆ ಒಂದಿಷ್ಟು ಹೊತ್ತು ಹರಟೆ ಹೊಡೆದರು ಮನಸ್ಸಿಗೆ ಸಮಾಧಾನವಾಗಲಿಲ್ಲ.ನಿಜವೆಂದರೆ ಸರಿಯಾಗಿ ಮಾತನಾಡಲೂ ಇಲ್ಲ. ಸುಮ್ಮನೆ ಅತ್ತ ಇತ್ತ ತಿರುಗಾಡಿದೆ .. ಸ್ವಲ್ಪ ಹೊತ್ತು ಹಾಡು ಕೇಳಿದೆ .. ಉಹ್ಮ್ ..ಎನೂ ಪ್ರಯೋಜನ ಇಲ್ಲ .. ಹೆಂಡತಿ ಅಡಿಗೆ ತಯಾರಿ ನಡೆಸಿದ್ದಾಳೆ .. ಸುಮ್ಮನೆ ಅವಳನ್ನು ಕರೆಯೋದು ಬೇಡ ಅಂತಾ ನನ್ನ ಲ್ಯಾಪಟೊಪ್ ಒನ್ ಮಾಡಿ ಇಂಟೆರ್ನೆಟನಲ್ಲಿ ಬ್ಲೊಗ್ ಓದ ತೊಡಗಿದೆ, ಬ್ಲೊಗ್ ಓದಲೂ ಸಹ ಮನಸಾಗಲಿಲ್ಲ .. ಇಮೇಲ್ ನೋಡೋಣವೆಂದು ನನ್ನ ಜಿಮೇಲ್ ತಾಣಕ್ಕೆ ಹೋದೆ. ಅಲ್ಲಿ ಡಿವಿಜಿಯವರ ಕಗ್ಗವೊಂದನ್ನು ಮಿತ್ರ ಪೊಸ್ಟ್ ಮಾಡಿದ್ದ. ಕಗ್ಗವನ್ನು ಓದದೆ ಬಹಳ ದಿನವೇ ಆಗಿ ಹೋಗಿತ್ತು .. ಅದಲ್ಲದೆ ಬೇರೆ ಪುಸ್ತಕಗನ್ನೂ ಸಹ ಓದಿರಲಿಲ್ಲ [ಕೆಲಸದ ಡೊಕ್ಯುಮೆಂಟಗಳನ್ನು ಹೊರತು ಪಡಿಸಿ] , ನನ್ನ ಕನ್ನಡ ಕೃಷಿಗೂ ನೀರೆರೆದಿರಲಿಲ್ಲ , ಆ ಮಿಂಚಂಚೆಯನ್ನು ತೆಗೆದು ನೋಡಿದೆ .. ಈ ಕೆಳಗಿನ ಕಗ್ಗ ಅಲ್ಲಿತ್ತು ,

ಅಂತಾನು ಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನು ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||

ಅರ್ಥ ನಾನು ಕಲ್ಪಿಸಿದಂತೆ :
ಯಾವಾಗಾದರು , ಹೇಗಾದರು ಸರಿ . ನಿನ್ನ ಮಿತಿಯೊಳಗೆ ನಿನಗನಿಸಿದಂತೆ ,|
ಮನಸ್ಸಿಗೆ ಬೆಸರವಾದಾಗ , ಕಳವಳಗೊಂಡಾಗ, ಕೋಪಗೂಂಡಾಗ ನೀ ನಡೆ ಶಾಂತಿ , ನೆಮ್ಮದಿಯಡೆಗೆ.||
ಕೆರಳಿದಮನಕ್ಕೆ ಕೆಲವೊಮ್ಮೆ ಸಾಂತ್ವನವ ನೀಡು , ತಿಳಿಗೊಳಿಸು . ಕೆಲವೂಮ್ಮೆ ಮಗುವನ್ನು ದಾರಿ ತಪ್ಪದಂತೆ
ತಿದ್ದುವಂತೆ ಮನವನ್ನು ತಿದ್ದು , ಶಿಕ್ಷಿಸು |
ನಿನ್ನನ್ನು ನಿನ್ನ ಆತ್ಮವನ್ನು ತಿದ್ದುತಿರು , ಹೊಸತನವ ಕಲಿಸುತ್ತಿರು , ಎಂದೆಂದು ಉನ್ನತಿಯನ್ನು ಹೊಂದು||

ಅಂದರೆ .. ಏಷ್ಟೆ ಬೇಸರವಾಗಲಿ , ಕೋಪವೇ ಬಂದಿರಲಿ ಅದನ್ನು ಹಿಡಿದಿಟ್ಟು , ಬದಿಗೊತ್ತಿ ,ಮುನ್ನಡೆಯುವ ಸೂತ್ರ ನಿನ್ನ ಕೈಯಲ್ಲೆ ಇದೆ .. ಅದನ್ನು ಸೂಕ್ತವಾಗಿ ಬಳಸುವುದನ್ನು ಕಲಿ, ಸರಿಯಾದ ರೀತಿಯಲ್ಲಿ ಪಳಗಿಸುವುದನ್ನು ಅರಿತುಕೊ .. ನಿನ್ನ ಆತ್ಮೋದ್ದಾರಕ್ಕೆ ನೀನೆ ಹೋಣೆ , ಮರ್ಕಟ ಮನಸ್ಸನ್ನು ಹತೋಟಿಗೆ ತರುವ ದಾರಿಯನ್ನು ನೀನೆ ಕಲಿ ಎಂಬರ್ಥವನ್ನು ಡಿ.ವಿ.ಜಿ ಯವರು ಇಲ್ಲಿ ಹೇಳ ಭಯಸುತ್ತಿರ ಬಹುದೇ ಎಂದು ನನಗನಿಸಿತು. ಕಗ್ಗವನ್ನು ಸಂಪೂರ್ಣವಾಗಿ ಮತ್ತೂಮ್ಮೆ ಓದಿ .. ಮನಸ್ಸಿಗನಿಸಿದ ಅರ್ಥವನ್ನು ಬರೆದಿಟ್ಟುಕೊಂಡೆ .

ಮಿಂಚಂಚೆಯನ್ನು ಮುಚ್ಚಿ ಒಮ್ಮೆ ಜೋರಾಗಿ ಉಸಿರೆಳೆದು , ಬಾಗಿಲು ತೆರೆದು ಹೊರಗೆ ಬಂದು ನಿಂತೆ. ಕಪ್ಪು ಮೋಡ , ತುಂತುರು ಮಳೆಯಾಗುತ್ತಿತ್ತು, ಪಶ್ಚಿಮದ ಗಾಳಿ ಸ್ವಲ್ಪ ಜೋರಾಗಿಯೆ ಬರುತ್ತಿತ್ತು ಮೈ ಮನಸ್ಸಿಗೆ ಒಂದು ತರಹದ ಉಲ್ಲಾಸವಾಯಿತು. ಬೇಸರ ಮಾಯವಾದಂತೆ ಇತ್ತು. ಹೇಗಿದ್ದರು ವಾರಾಂತ್ಯ , ಜೊತೆಗೆ ಭಾರತ ಭಂದ್
ಸಾಧ್ಯತೆ ಇದೆ ಅಂದಮೇಲೆ ಮೂರು ದಿನದ ರಜೆ ಕಟ್ಟಿಟ್ಟಿದ್ದು . ಯಾವುದಾದರು ಪುಸ್ತಕ ಓದೆ ತೀರುವುದು ಎಂದು ನಿರ್ಧಾರ ಮಾಡಿದೆ. ಬರಿ ಕಥೆ , ಕಾದಂಬರಿಯೊಂದೆ ಅಲ್ಲ ,ಕೆಲಸಕ್ಕೆ ಸಂಬಂಧ ಪಟ್ಟ ಪುಸ್ತಕವಾದರು ಸರಿ , ಕನ್ನಡ , ಇಂಗ್ಲಿಷ ಯಾವುದಾದರು ಸರಿ ಒಟ್ಟಿನಲ್ಲಿ ಓದ ಬೇಕು ಅಷ್ಟೆ . ನಿರ್ಧಾರ ದೃಡವಾಗಿತ್ತು.ಕಪಾಟು ಹುಡುಕಿದಾಗ ಸಿಕ್ಕಿದ್ದು ಯಾವಾಗಲೊಮ್ಮೆ ಪುಸ್ತಕ ಮಳಿಗೆಗೆ ಹೋದಾಗ ತಂದ ಅಥವಾ ಮಿತ್ರರಿಂದ ಯೆರವಲು ಪಡೆದ ಕೆಲವು ಇನ್ನು ಓದಿರದ ಕನ್ನಡ ಪುಸ್ತಕಗಳು.ಓದಿರದ ಪುಸ್ತಕ ಕಂಡಾಗ ಬಿಡುವುದಾದರು ಹೇಗೆ , ಅಲ್ಲವೇ ಮತ್ತೆ .. !!!!

ನಾನೀಗ ಓದುತ್ತಿರುವ ಪುಸ್ತಕಗಳು ,
೧. ಚೇಳು -- ವಸುಧೇಂದ್ರ

೨. ಯುಗಾದಿ -- ವಸುಧೇಂದ್ರ


ವಿಸೂ: ಕಗ್ಗದ ಅರ್ಥ ಕೇವಲ ನನ್ನ ವಾಖ್ಯಾನ , ಬೇರೆಯ ರೀತಿಯಲ್ಲೂ ಅರ್ಥಗಳು ಇರಬಹುದು , ಎಕೆಂದರೆ ಕಗ್ಗದ ಮಹಿಮೆಯೆ ಅದು. ಹಾಗೇನಾದರು ಇದ್ದಲ್ಲಿ , ತಿಳಿದಲ್ಲಿ ದಯವಿಟ್ಟು ಕಮೆಂಟಿನಲ್ಲಿ ತಿಳಿಸಿ . ಎನಾದರು ತಪ್ಪಿದ್ದರೆ ತಿದ್ದಿ ...

Monday, April 26, 2010

ವರ್ಷಾವು ಕಳೆದಾವೋ ..

ಇವತ್ತಿಗೆ ನನ್ನ ಬ್ಲೊಗಗೆ ಸರಿಯಾಗಿ ಎರಡು ವರ್ಷ ತುಂಬಿತು. ಅಂಬೆಗಾಲಿಡುತ್ತ .. ನಿಧಾನವಾಗಿ ನಡೆಯಲು ಕಲಿಯುವಷ್ಟರಲ್ಲಿ
ಮತ್ತೆ ಬೆಳವಣಿಗೆ ನಿಂತು ಹೊಯಿತು. ಅಂದರೆ ಎರಡು ವರ್ಷದಲ್ಲಿ ನಾನು ಬರೆದ ಬರಹಗಳು ಬೆರಳೆಣಿಕೆಯಷ್ಟು.
ಪ್ರತಿ ಬಾರಿ ಉತ್ಸಾಹದಿಂದ ಎನಾದರು ಬರೆಯೋಣ ಅಂತ ಪ್ರಾರಂಭಿಸಿ .. .... ಅಷ್ಟೆ ಪ್ರಾರಂಭ ಮಾತ್ರ .. ಕೋನೆ
ಕಂಡಿರುವುದು ಕೆಲವು ಮಾತ್ರ .. ಒಮ್ಮೊಮ್ಮೆ ಈ ಬ್ಲೊಗ್ ಬರೆಯೋದು ಸಾಕು , ಸುಮ್ನೆ ಲಿಂಕ್ ತೆಗೆದು ಹಾಕಿ ಬಿಡೋಣ ಎನ್ನಿಸುವಷ್ಟು ಸಿಟ್ಟು ನನ್ನ ಮೇಲೆ ಬರುತ್ತದೆ, ಆದರೂ ಯಾಕೊ ತೆಗೆದು ಹಾಕಲು ಮನಸಿಲ್ಲ. ಅಪರೂಪಕ್ಕೊಮ್ಮೆ ಬರೆದರು
ನೀವು ಬಂದು ಓದಿ ಪ್ರೊತ್ಸಾಹಿಸುತ್ತಿರಿ. ಅಷ್ಟೆ ಮತ್ತೆ ಆಸೆ ಚಿಗುರುತ್ತದೆ.
ಮುಂದಿನ ಬರಹಗಳು ಇದೆ ರೀತಿಯಲ್ಲಿ ಸಾಗುತ್ತವೆಯೋ ಅಥವಾ ಮತ್ತಷ್ಟು ಬರೆಯಲು
ಶಕ್ತಿ ಮತ್ತು ಸ್ಪೂರ್ಥಿ ಸಿಗುವುದೊ ಕಾದು ನೋಡ ಬೇಕಷ್ಟೆ.

Thursday, April 1, 2010

ವಯನಾಡ ಪ್ರವಾಸ -೩

ಬಾಣಾಸುರ ಅಣೆಕಟ್ಟನ್ನು ತಲುಪಲು ನಮಗೆ ಪೂಕೊಡ್ ಲೇಕನಿಂದ ಸುಮಾರು ಎರಡು ಗಂಟೆಗಳಷ್ಟು ಸಮಯ ಬೇಕಾಯಿತು.
ರ‍ಸ್ತೆ ಚೆನ್ನಾಗಿದ್ದರೂ ದೊಡ್ಡ ದೊಡ್ಡ ತಿರುವುಗಳಿವೆ. ಸರಿಯಾಗಿ ೧ ಗಂಟೆಗೆ ಬಾಣಾಸುರ ಅಣೆಕಟ್ಟಿನ ಹತ್ತಿರ ಬಂದೆವು.



ಇದು ಅತ್ಯಂತ ದೊಡ್ಡ ಹಾಗು ಸುಂದರ ಅಣೆಕಟ್ಟು. ಹಲವಾರು ಎಕರೆ ಪ್ರದೇಶ ಕೇವಲ ನೀರಿನಿಂದ ಆವೃತವಾಗಿದೆ.
ಇದರ ನಿರ್ಮಾಣಕ್ಕೆ ಸುಮಾರು ೨೫ ವರ್ಷಗಷ್ಟು ಸಮಯ ಹಿಡಿಯಿತು ಎಂದು ಪ್ರವೇಶ ದ್ವಾರದಲ್ಲಿದ್ದ ಗಾರ್ಡ್ ಒಬ್ಬರಿಂದ
ತಿಳಿದು ಕೊಂಡೆ ಅಷ್ಟೆ ಅಲ್ಲದೇ ಕೇವಲ ೫ ವರ್ಷಗಳ ಹಿಂದಿನಿಂದ ಇಲ್ಲಿಗೆ ಸಾರ್ವಜಕರಿಗೆ ಪ್ರವೇಶ ಕೊಡಲಾಗಿತ್ತಿದೆ ಎಂದು ಸಹ
ಆ ಗಾರ್ಡ ತಿಳಿಸಿದರು.



ಇಲ್ಲಿ ಬೊಟಿಂಗ್ ವ್ಯವಸ್ಥೆ ಸಹ ಇದೆ ಆದರೆ ಕೇವಲ್ ಮೋಟರ್ ಬೋಟ್ ಗಳುಮಾತ್ರ. ೫ ಜನರಿಗೆ ೩೦೦ ರೂಪಾಯಿ.
ಎರಡು ಬಗೆಯ ಮೋಟರ ಬೋಟ ಸೌಲಭ್ಯವಿದೆ. ಸ್ಲೊವ್ ಬೋಟ್ ಮತ್ತು ಸ್ಪೀಡ್ ಬೋಟ್ . ಸ್ಲೊವ್ ಬೊಟ್ನಲ್ಲಿ ಅಣೆಕಟ್ಟಿನ ಹಿನ್ನಿರಿನಲ್ಲಿ ಹೋಗಿ ಬರಲು ೨೦ ನಿಮಿಷ ಹಾಗು ಸ್ಪೀಡ್ ಬೋಟ್ನಲ್ಲಿ ೧೫ ನಿಮಿಷ.
ನಾವು ಹೋದವರು ಒಟ್ಟೂ ೬ ಜನ ಆದರೆ ಒಂದು ಬೋಟನಲ್ಲಿ ೫ ಜನರಿಗೆ ಮಾತ್ರವೇ ಪ್ರವೇಶ. ನಾನು ಇಲ್ಲಿಯೆ ಫೋಟೊ ತೆಗೆಯಿತ್ತಿರುತ್ತೇನೆ ನೀವು ಹೋಗಿಬನ್ನಿ ಎಂದು ಉಳಿದವರಿಗೆ ಹೇಳಿದೆ. ನನ್ನ ಅದೃಷ್ಟಕ್ಕೆ ಮತ್ತೊಂದು ಬೋಟಿನಲಿ ಹೋಗುವವರು ಕೇವಲ ೪ ಜನ್ ಮಾತ್ರವಿದ್ದರು ಆದ್ದರಿಂದ ನಾನು ಅವರೋಡನೆ ಹೋಗುವುದು ಎಂದು ಮಾತಾಯಿತು. ಬೊಟಿಂಗ್ ಮಾಡುವಾಗ ಆದ ಮಜ ಮತ್ತು ಕಂಡ ಪ್ರಕೃತಿ ಸೌಂದರ್ಯ ಹೇಳಲು ಸಾಧ್ಯವಿಲ್ಲ ನೋಡಿಯೇ ಸವಿಯ ಬೇಕು. ನೀರು ಬರ್ರ್ ನೆ ಮೈಗೆ ಹಾರುತ್ತಿತ್ತು.ಆದರು ಕಷ್ಟಪಟ್ಟು ಒಂದಿಷ್ಟು ಫೋಟೊಗಳನ್ನು ಕ್ಲಿಕ್ಕಿಸಿದೆ.






ಮಧ್ಯಾನದ ಉರಿ ಬಿಸಿಲು. ಹಸಿವಾಗುತ್ತಿದೆ. ಆದರು ಹತ್ತಿರದಲ್ಲಿ ಯಾವುದೇ ಹೋಟೆಲ್ ಇರಲಿಲ್ಲ. ಅಣೇಕಟ್ಟು ಜನಸಂಪರ್ಕ ಜಾಗಕ್ಕಿಂತ ಸ್ವಲ್ಪ ದೂರವಿತ್ತು. ಅಲ್ಲಿ ಎರಡೆರಡು ಐಸ್ ಕ್ರೀಮ್ ತಿಂದು ಮುಂದೆ ಕುರುವ ದ್ವೀಪ ಪ್ರದೇಶಕ್ಕೆ ಹೋರಟೆವು.

ಕುರುವ ದ್ವೀಪ ಒಂದು ದಿನದ ಪಿಕ್ನಿಕ್ ಗೆ ಹೇಳಿಮಾಡಿಸಿದ ಜಾಗ. ಸುತ್ತಲೂ ಕಬಿನಿಯಿಂದ ಹರಿದು ಬರುವ ನೀರು. ಆ ನೀರಿನಲ್ಲಿಯೇ ನಡೆದು ಹೋಗಬೇಕು. ಆಮೇಲೆ. ಸ್ವಲ್ಪ ದೂರ ಕಾಡಿನಲ್ಲಿ ನಡೆದರೆ ಮುಂದೆ ಮತ್ತೆ ನೀರು. ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದು ಸ್ವಲ್ಪ ಕಷ್ಟವೇ ಸರಿ. ನಾವು ಅಲ್ಲಿಗೆ ಹೋದಾಗ ಸುಮಾರು ೪ ಗಂಟೆ. ೫.೩೦ ಹೊತ್ತಿಗೆಲ್ಲಾ ಅಲ್ಲಿಗೆ ಪ್ರವೇಶವನ್ನು ಮುಚ್ಚುತ್ತಾರೆ.ಆದ್ದರಿಂದ ಬೇಗ ಬೇಗನೇ ನೀರಿನಲ್ಲಿ ಹೋಗಲು ಬಟ್ಟೆ ಬದಲಾಯಿಸಿ ಒಂದಿಷ್ಟು ಬಾಳೆಹಣ್ಣು ಮತ್ತು ಜ್ಯುಸ್ ತೆಗೆದು ಕೊಂಡು ಹೊರಟೆವು. ನೀರು ಸುಮಾರು ೩ ಪೀಟ್ ನಷ್ಟು ಇತ್ತು ಅಲ್ಲದೆಯೆ ಕಲ್ಲುಗಳು ಜಾರುತ್ತಿದ್ದವು. ನಿಧಾನವಾಗಿ ಒಬ್ಬರ ಕೈ ಮತ್ತೊಬ್ಬರು ಹಿಡಿದು ದ್ವೀಪ ಪ್ರದೇಶಕ್ಕೆ ಹೋದೆವು. ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆದು ಮುಂದೆ ನೀರಿರುವ ಜಾಗಕ್ಕೆ ಹೋಗ ತೊಡಗಿದೇವು.
ಬೇಸಿಗೆ ಸಮಯ ಅಲ್ಲದೆ ಶಿವರಾತ್ರಿಯ ರಜೆ ಇದ್ದುದರಿಂದ ಅಲ್ಲಿಗೆ ಬಹಳಷ್ಟು ಮಂದಿ ಬಂದಿದ್ದರು. ನಾವು ಅವರೋಡಗೂಡಿ
ಸ್ವಲ ಹೊತ್ತು ನೀರಿನಲ್ಲಿ ಆಟವಾಡಿ ಮರಳಿ ಕಾರಿನತ್ತ ಹೋರಟೆವು. ಆಗಲೇ ಸಂಜೆಯಾಗ ತೋಡಗಿತ್ತು. ಮುಂದೆ ಎಲ್ಲಿಗೆ
ಎಂದು ಯಾರು ನಿರ್ಧಾರ ಮಾಡಿರಲಿಲ್ಲ. ಅದಕ್ಕಾಗಿ ಸ್ವಲ್ಪ ಹೊತ್ತು ವ್ಯಯಿಸಿ ಕೊನೆಗೆ ಮೈಸೂರಗೆ ಹೋಗಿ ಉಳಿಯುವುದು ಎಂದು ತೀರ್ಮಾನ ಮಾಡಿದೆವು.
ಸಮಯ ೬ ಗಂಟೆ. ಆದ್ದರಿಂದ ೧೦-೧೧ ಗಂಟೆಯ ಒಳಗೆಲ್ಲ ಮೈಸೂರ್ ತಲುಪ ಬಹುದು ಎಂದು ಕೊಡಿದ್ದೇವು. ಆದರೆ ನಮ್ಮ ಕಲ್ಪನೆ ತಲೆಕೆಳಗಾಗಿದ್ದು ಕೇರಳ/ಕರ್ನಾಟಕದ ಗದಿ ತಲುಪಿದಾಗ. ಇದು ಕಾಡು ಪ್ರದೇಶವಾದ್ದರಿಂದ ರಾತ್ರಿ ಸಮಯ ಪ್ರಾಣಿಗಳು ತಿರುಗಾಡುತ್ತವೆ ಎಂದು ಸಂಜೆ ೬ ರಿಂದ ಬೆಳಗ್ಗೆ ೬-೭ ವರೆಗೆ ರಸ್ತೆಗೆ ಪ್ರವೇಶ ಕೊಡುವುದಿಲ್ಲವಂತೆ. ಈ ವಿಷಯ ನಮಗೆ ತಿಳಿದಿರಲಿಲ್ಲ. ಆದ್ದರಿಂದ ನಮ್ಮ ಪ್ಲಾನ್ ಎಲ್ಲ ತಲೆಕೆಳಗಾಯಿತು. ಇನ್ನು ಮೈಸೊರಗೆ ಹೋಗಲು ಇರುವುದು ಒಂದೊ ಕೊಡಗಿನ ಮೇಲೆ [ ಗೋಣಿಕೊಪ್ಪಲ ದಾರಿ] .. ಇಲ್ಲವೋ ಸುಲ್ತಾನ್ ಬತೇರಿಗೆ ಹೋಗಿ ಮೈಸೂರ್ ಗೆ ಹೋಗುವುದು. ಆದರೆ ಅಲ್ಲಿಯೂ ಗಡಿ ಬಂದು ಮಾಡಬಹುದು ಎಂಬ ಮಾತು ಬೇರೆ. ಸರಿ ಕೊಡಗಿನ ದಾರಿಯನ್ನೆ ಹಿಡಿದೆವು. ಹೋರಟ ಮೇಲೆ ಗೊತ್ತಾಯಿತು ಈ ರಸ್ತೆಗೆ ಬರಲೇ ಬಾರದಿತ್ತೆಂದು. ಅಲ್ಲಿ ರಸ್ತೆಯೆ ಇರಲಿಲ್ಲ. ಬರಿ ಹೊಂಡ , ಹಳ್ಳ ಕೊಳ್ಳ. ಕಷ್ಟಪಟ್ಟು ಅಂತೂ ಮೈಸೂರ್ ತಲುಪಿದಾಗ ೨ ಗಂಟೆ. ಅಂದರೆ ನಮ್ಮ ಲೆಕ್ಕಾಚಾರಕ್ಕಿಂತ ೪-೫ ಗಂಟೆ ತಡವಾಗಿತ್ತು. ಇಲ್ಲಿ ಇನ್ನೊಂದು ತಲೆಬಿಸಿ.ಯಾವ ಹೋಟೆಲನಲ್ಲು ರೂಮ್ ಕಾಲಿ ಇಲ್ಲ . ಅಂತು ಇಂತು ಒಂದು ರೂಮ್ ಸಿಕ್ಕಿತು. ನಮ್ಮ ಜೋತೆ ಇದ್ದ ಮತ್ತೊಂದು ಜೋಡಿ ಅಲ್ಲಿ ಉಳಿಯುವುದೆಂದು ನಾವು
ನಡುರಾತ್ರಿಯಲ್ಲೆ ಬೆಂಗಳೂರಿಗೆ ಹೋಗುವುದು ಎಂದು ತೀರ್ಮಾನಿಸಿ ಅವರಿಂದ ಬೀಳ್ಗೊಂಡು ಬೆಂಗಳೂರಿಗೆ ಬಂದು ತಲುಪಿದಾಗ
ಸರಿಯಾಗಿ ೪.೩೦. ಮೈಸೂರ್ ಸುತ್ತ ಬೇಕೆಂಬ ಹಂಬಲವಂತು ದೂರವಾಗಿತ್ತೆನ್ನಿ. ಸಾಕಷ್ಟು ಸುಸ್ತಾಗಿತ್ತು ಮರುದಿನ ಭಾನುವಾರ ಬೇರೆ. ಅಷ್ಟೆ ಕೈ ಕಾಲು ಮುಖ ತೋಳೆದು ವಯನಾಡ ಪ್ರವಾಸದ ನೆನಪನ್ನು ಮೆಲಕು ಹಾಕುತ್ತ ನಿದ್ದೆಗೆ ಜಾರಿದೆವು.

ಅಂತರ್ಜಾಲದಲ್ಲಿ ಸಿರ್ಸಿ




ಬೆಂಗಳೂರಿಗೆ ಬಂದ ಮೇಲೆ ಊರಿನ ಸುತ್ತಮುತ್ತಲ ಸುದ್ದಿ ಕೇವಲ ಊರಿಗೆ ಫೋನ್ ಮಾಡಿದಾಗ ಮಾತ್ರ ತಿಳಿಯುತ್ತಿತ್ತು.
ಅದು ಕೇಲವು ಸುದ್ದಿಗಳು ಮಾತ್ರ. ಆದರೆ ಈಗ ಕೇಲವು ಉತ್ಸಾಹಿಗಳು ಟೀಮ್ ಸಿರ್ಸಿ ಹೆಸರಿನಲ್ಲಿ ಒಂದು ವೆಬ್ ಸೈಟ್
ತೆರೆದಿದ್ದಾರೆ. ಇಲ್ಲಿ ಸಿರ್ಸಿಯಲ್ಲಿ ಪ್ರಕಟವಾಗುವ ಮುಖ್ಯ ಪತ್ರಿಕೆ ಲೋಕಧ್ವನಿಯನ್ನು ಸಹ ಹಾಕಲಾಗುತ್ತಿದೆ.
ಇದರಿಂದ ಉತ್ತರ ಕನ್ನಡ ಜಿಲ್ಲೆಯ ಸುದ್ದಿ ಇನ್ನು ಕೇವಲ ಒಂದು ಕ್ಲಿಕ್ ದೂರದಲ್ಲಿದೆ.
ಇವಿಷ್ಟೆ ಅಲ್ಲದೇ .. ಕಥೆ , ಕವನ .. ಪ್ರವಾಸಿ ತಾಣಗಳು .. ಅಡಿಕೆ ಧಾರಣೆ .. ಜಾಹಿರಾತುಗಳು .. ಹೀಗೆ ಹಲವು
ವಿಷಯಗಳನ್ನು ಸಹ ಓದಬಹುದು. ಉತ್ಸಾಹವಿದ್ದಲ್ಲಿ .. ಕಥೆ , ಕವನ ಅಥವಾ ಲೇಖನಗಳನ್ನು ಪ್ರಕಟಿಸಲೂ ಬಹುದು.
ಬನ್ನಿ ಎಲ್ಲರೂ ಕೈಗೂಡಿಸೋಣ. ನಮ್ಮ ಜಿಲ್ಲೆಗೂ ಅಂತರ್ಜಾಲದಲ್ಲಿ ಒಂದು ಹೊಸ ಅರ್ಥ ಕೊಡೋಣ.

ಲಿಂಕ್: http://sirsi.in/

ಕನ್ನಡದಲ್ಲಿ ಓದಲು : http://sirsi.in/kannada

Tuesday, March 23, 2010

ವಯನಾಡ್ ಪ್ರವಾಸ -- ೨

[ ಕೆಲಸದ ಒತ್ತಡದಿಂದ ಕೆಲವು ದಿನಗಳಿಂದ ಬ್ಲೊಗ್ ಲೋಕಕ್ಕೆ ಬಂದಿರಲಿಲ್ಲ.. ಅದಕ್ಕೆ ಎರಡನೆಯ ಭಾಗ ಪ್ರಕಟಿಸಲು ಸ್ವಲ್ಪ ಸಮಯ ಹೀಡಿಯಿತು. ಮುಂದಿನ ಭಾಗವನ್ನು ಬೇಗನೆ ಹಾಕುವೆ ... ]

ಎಡಕಲ್ ಗುಹೆಯಿಂದ ಮತ್ತೆ ಜೀಪನ್ನು ಹತ್ತಿ ಕೆಳಗೆ ಬಂದರೆ ಉರಿಬಿಸಿಲು ತನ್ನ ಪ್ರತಾಪವನ್ನು ತೊರಿಸಯೇ ಬಿಟ್ಟಿತ್ತು. ನಾವು ಪಾರ್ಕ ಮಾಡಿದ ಕಾರು ಎಷ್ಟು ಬಿಸಿಯಾಗಿತ್ತೆಂದರೆ ಬಾಗಿಲು ತೆರೆಯುತ್ತಿದ್ದಂತೆ ಬಿಸಿ ಗಾಳಿ ಮುಖಕ್ಕೆ ತಾಗಿ ಒಮ್ಮೆ ಚುರ್ ಎಂದಿತು. ಸ್ವಲ್ಪ ಹೊತ್ತು ಎಸಿ ಹಚ್ಚಿಟ್ಟು ತಂಪು ಪಾನೀಯ ಕುಡಿದು ಅಲ್ಲಿಂದ ಹೊರಟೆವು.

ಮುಂದಿನ ಸ್ಥಳ ಫ್ಯಾಂಟಮ್ ರಾಕ್ .. ಒಂದು ಕಲ್ಲು ಬೆಟ್ಟ ನೋಡಲು ಪಕ್ಕಾ skull ತರ ಇದೆ. ಅದಕ್ಕೆ ಇಲ್ಲಿಯವರು
ಫ್ಯಾಂಟಮ್ ರಾಕ್ ಅಂತಾ ನಾಮಕರಣ ಮಾಡಿರಬೇಕು. ಅದೊಂದು ಬೆಟ್ಟ ಬಿಟ್ಟು ಸುತ್ತಲು ಶಿಲೆ ಕಲ್ಲನ್ನು ಎತ್ತುವ ಗಣಿ ಕಾರ್ಯ
ನಡೆಯುತ್ತಿದೆ. ಇನ್ನು ಕೆಲವೆ ವರ್ಷಗಳಲ್ಲಿ ಈ ಫ್ಯಾಂಟಮ್ ರಾಕ್ ಮಾಯವಾದರು ಆಗಬಹುದು.


[ phantom Rock ]



ಅಲ್ಲಿಂದ ಮುಂದೆ ನಾವು ಹೋಗಿದ್ದು ಒಂದು ಮ್ಯೂಸಿಯಮ್ ಗೆ . ಅಲ್ಲಿ ಒಂದು ಟ್ರೈಬಲ್ ಕಮ್ಯೂನಿಟಿಯವರು ಉಪಯೋಗಿಸುತ್ತಿದ್ದ
ಗೃಹ ಮತ್ತು ವ್ಯವಾಸಾಯ ಉಪಕರಣಗಳು ಹಾಗು ಹಲವು ಮೂರ್ತಿಗಳನ್ನು ವೀಕ್ಷಣೆಗೆ ಇಡಲಾಗಿದೆ.ಇವೆಲ್ಲವು ಮೀನಮುಟ್ಟಿ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಇರುವುದರಿಂದ ಒಮ್ಮೆ ಭೇಟಿ ಕೊಟ್ಟು ಮುಂದೆ ಸಾಗಿದೆವು.

ಆಗಲೇ , ಸಮಯ ೪ ಗಂಟೆ. ಇಲ್ಲಿ ಎಲ್ಲ ಸ್ಥಳಗಳು ಸಾಯಂಕಾಲ ೫ ಗಂಟೆ ಒಳಗೆ ಮುಚ್ಚುತ್ತವೆ ಎಂದು ಮೊದಲೆ ಒಬ್ಬರು ಹೇಳಿದ್ದರು
ಆದ್ದರಿಂದ ಮಾರ್ಗ ಮಧ್ಯ ಬರುವ ಇನ್ನು ಹಲವು ಚಿಕ್ಕ ಸ್ಥಳಗಳನ್ನು ಬಿಟ್ಟು ಮೀನಮುಟ್ಟಿಗೆ ತಲುಪಿದೆವು.
ಈ ಜಾಗ ಕೇರಳದಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಇದೆ. ಹೈವೆ ಇಂದ ಸುಮಾರು ಎರಡು ಕಿಲೊಮೀಟರ್ ಒಳಗೆ ಹೋದರೆ ಒಂದು ಸುಂದರ ಕಾಪಿ ಹಾಗು ಟೀ ಎಸ್ಟೇಟ್ ಸಿಗುತ್ತದೆ.ಅಲ್ಲಿ ಕಾರ್ ಪಾರ್ಕ್ ಮಾಡಿದೆವು. ಫಾಲ್ಸ್ ಗೆ ಹೋಗಲು ಪ್ರವೇಷ ದರ ೧೦ ಹಾಗು ಅದಕ್ಕಿಂತ ಕಮ್ಮಿ ಜನರಿದ್ದಲ್ಲಿ ೩೦೦ ರುಪಾಯಿಗಳು . ಸಹಾಯಕರಾಗಿ ಒಬ್ಬ ಗಾರ್ಡ ಕೂಡ ಬರುತ್ತಾರೆ. ಅವರಿಗೆ ಇಷ್ಟ ಬಂದಷ್ಟು ಟಿಪ್ಸ್ ಕೊಡಬಹುದು.



[ Tea estate]


ಜಲಪಾತ ಕೇವಲ ಒಂದು ಅರ್ಧ ಕೀಮಿ ದೂರ ಆದರೆ ದಾರಿ ಸುಗಮವಾಗಿರಲಿಲ್ಲ.ಮೊದಲು ಕಾಪಿ ಎಸ್ಟೇಟ್ ಮಧ್ಯ ಹಾದು ಹೋಗುಬೇಕು. ಮುಂದೆ ಮುಂದೆ ಸಾಗುತ್ತಿದ್ದಂತೆ ಅಪಾಯದ ಅರಿವಾಗುತ್ತದೆ. ಒಂದು ಕಡೆ ಮಾತ್ರ ಹಿಡಿಯಲು ಅವಕಾಶ ಮತ್ತೊಂದೆಡೆ ಪ್ರಪಾತ.ಕೆಲವು ಕಡೆಯಂತು ಕೇವಲ ಒಂದು ಹಗ್ಗದ ಸಹಾಯದಿಂದ ನಿಧಾನ ಇಳಿಯ ಬೇಕು. ಅಂತು ಇಂತು ಹಲವು ಕಡೆ ಕುಳಿತು , ಬಿದ್ದು ಎದ್ದು ಜಲಪಾತದ ಹತ್ತಿರ ತಲುಪಿದೆವು. ಅಬ್ಬಾ ಎಂತಹ ಸುಂದರ ದೃಶ್ಯ. ನಿಜಕ್ಕೂ ಅಷ್ಟು ನಡೆದು ಬಂದದ್ದು ಸಾರ್ಥಕ ಎನಿಸುವಷ್ಟು ಮನಮೋಹಕವಾಗಿದೆ. ಇಲ್ಲಿ ಒಂದು ವಿಶೇಷವೆಂದರೆ , ಜಲಪಾತದ ಒಂದು ಭಾಗದ ಬೆಟ್ಟ ಕೇರಳಕ್ಕೆ ಸೇರಿದ್ದು ಇನ್ನೊಂದು ಭಾಗ ತಮಿಳುನಾಡಿನದು. ಎರಡು ಗುಡ್ಡಗಳ ನಡುವೆ ಈ ಜಲಪಾತ , ತುದಿಯಲ್ಲಿ ದೊಡ್ಡ ಪ್ರಪಾತ.






ಹೋಗುವಾಗ ಯಾರು ನೀರಿಗೆ ಇಳಿಯುವುದು ಬೇಡ , ಬೇಗನೆ ನೋಡಿ ಬಂದು ಬಿಡೋಣವೆಂದು ನಿರ್ಧರಿಸಿದ್ದೆವು .. ಆದರೆ ಅಲ್ಲಿ ಹೋದ ಮೇಲೆ ನೀರಾಟವಾಡದೆ ಮೇಲೆ ಹೋಗಲು ಮನಸ್ಸು ಕೇಳಲೆ ಇಲ್ಲ .. ನಾವು ಮೂರು ಜನ ಗಂಡಸರು ಹಾಗು ಅಣ್ಣನ ೪ ವರ್ಷದ ಮಗುವನ್ನು ಹಿಡಿದು ನಿಧಾನವಾಗಿ ನೀರಿನಲ್ಲಿ ಈಜುತ್ತ ಜಲಪಾತ ಬೀಳುವಲ್ಲಿಗೆ ತಲುಪಿದೆವು. ನೀರು ಎಷ್ಟು ರಭಸವಾಗಿ ಬೀಳುತ್ತಿತ್ತೆಂದರೆ , ಮೈ ಮೇಲೆ ಬಿದ್ದ ನೀರು ಮಸ್ಸಾಜ್ ಮಾಡಿದಂತಾಗಿ ನೋವೆಲ್ಲ ಮಾಯವಾಗಿ ಹೋಗಿತ್ತು. ಹೆಂಗಸರು ಅಲ್ಲೆ ಹತ್ತಿರದಲ್ಲಿ ನೀರಿಗಿಳಿದು ಸ್ವಲ್ಪ ಹೊತ್ತು ಆಡಿದರು. ಅಲ್ಲಿ ಬಹಳಷ್ಟು ಜನರಿದ್ದರಿಂದ ಜಾಗ ಸ್ವಲ್ಪ ಇಕ್ಕಟ್ಟಾಗಿತ್ತು. ಅಲ್ಲಿ ಎರಡು ಜನ ಗಾರ್ಡ್ಸ್ ನೀರಿನಲ್ಲಿ ಅಪಾಯವಾಗದಂತೆ ನೋಡಿಕೊಳ್ಳಲ್ಲೆಂದೆ ಇರುವುದರಿಂದ ಭಯವನ್ನು ಸ್ವಲ್ಪ ಬದಿಗಿಟ್ಟು ನೀರಾಟವಾಡಿ ಮಜಾ ಮಾಡಿದೆವು.









[ This photo is taken standing almost below the falls .. few water drops fell on the lens , luckily nothing happened to camera :) ]


ಆಗಾಲೆ ಸೂರ್ಯ ಮುಳುಗುವ ಹೊತ್ತಾಗಿದ್ದರಿಂದ ಗಾರ್ಡ ಎಲ್ಲರನ್ನು ಮೇಲೆಕ್ಕೆ ಕಳಿಸುತ್ತಿದ್ದ. ನಾವು ಎಲ್ಲರೊಡಗೂಡಿ ಮೇಲಕ್ಕೆ ಹೋರಟೆವು. ಮೇಲಕ್ಕೆ ಹತ್ತುವುದು ಕೆಳಗೆ ಇಳಿಯುವುದಕ್ಕಿಂತ ಮತ್ತೂ ಕಷ್ಟವೆನಿಸ ತೊಡಗಿತ್ತು. ಅಂತು ಇಂತು ಮೇಲೇರಿ ಬರುವಷ್ಟರಲ್ಲಿ ಸೂರ್ಯ ನಿಧಾನವಾಗಿ ಪಶ್ಚಿಮಕ್ಕೆ ಜಾರುತ್ತಿದ್ದ.. ನಾನು ಕ್ಯಾಮರಾ ತೆಗೆದು ಒಂದಿಷ್ಟು ಫೊಟೊ ಕ್ಲಿಕ್ಕಿಸಿದೆ. ಎಷ್ಟು ಸುಸ್ತಾಗಿತ್ತೆಂದರೆ ಕ್ಯಾಮರ ಹಿಡಿದ ಕೈ ನಡುಗುತ್ತಿತ್ತು.













ಮೇಲೆ ಸ್ವಲ್ಪ ಹೊತ್ತು ವಿರಮಿಸಿ ಗಾರ್ಡಗೆ ವಿಧಾಯ ಹೇಳಿ ರಾತ್ರಿ ತಂಗಲು ಕಾಲ್ಪೆಟ್ಟ ಎಂಬ ಊರಿನತ್ತ ತೆರಳಿದೆವು. ಹೋಟೆಲ್ ವುಡಲ್ಯಾಂಡಿನಲ್ಲಿ ಮೋದಲೆ ರೂಮ್ ಕಾದಿರಿಸಿದ್ದರಿಂದ ಏನು ತೊಂದರೆ ಇರಲಿಲ್ಲ. ಅಲ್ಲಿ ತೆರ‍ಳಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದಾಗಲೇ ಮೈ ಮನಸ್ಸಿಗೆ ಸ್ವಲ್ಪ ಹಾಯ್ ಅನಿಸಿದ್ದು.ಊಟ ಮಾಡಿ ಮಲಗಿದ್ದೊಂದೆ ಬೆಳಗ್ಗೆ ಅಲಾರ್ಮ್ ಬಡಿದು ಕೊಂಡಾಗಲೆ ಎಚ್ಚರವಾದದ್ದು.
ಎದ್ದು ಬೆಳಗಿನ ಕಾರ್ಯವನ್ನೆಲ್ಲ ಮುಗಿಸಿ ತಿಂಡಿ ತಿನ್ನಲು ಹಿಂದಿನ ರಾತ್ರಿಯೇ ನೋಡಿಟ್ಟಿದ್ದ ಉಡುಪಿ ಹೋಟೆಲಗೆ ನುಗ್ಗಿದೆವು.
ತಿಂಡಿ ತಿನ್ನುತ್ತ ಹೋಟೆಲನವರ ಸಹಾಯದಿಂದ ಅಂದು ನೋಡಬೇಕಾದ ಸ್ಥಳಗಳ ಪಟ್ಟಿ ಸಿದ್ದವಾಯಿತು. ಅಲ್ಲಿ ನಮಗೆ ಕನ್ನಡ ಮಾತನಾಡುವವರು
ಸಿಕ್ಕಿದ್ದರಿಂದ ಮುಂದಿನ ಕಾರ್ಯಕ್ರಮ ರೂಪಿಸಲು ಮತ್ತೂ ಅನುಕೂಲವಾಯಿತು. ಹಿಂದಿನ ದಿನ ಪೂರ್ತಿ ಕೇವಲ ಬೆಟ್ಟ ಗುಡ್ಡ . ಚಾರಣದ ಜಾಗಗಳನ್ನು ನೋಡಿದ್ದರಿಂದ ಇಂದು ಸ್ವಲ್ಪ ಆರಾಮ ಎನಿಸುವ ಜಾಗಗಳನ್ನು ನೋಡುವುದು ಎಂದು ಮಾತಾಡಿಕೊಂಡೆವು.

ಗಡದ್ದಾಗಿ ತಿಂಡಿ ತಿಂದು , ಬಿಸಿ ಬಿಸಿ ಚಹ ಕುಡಿದು ಅಲ್ಲಿಂದ ನೇರವಾಗಿ ಪೂಕೊಡ್ ಲೇಕ್ ಎಂಬಲ್ಲಿಗೆ ಬಂದೆವು. ಇಲ್ಲಿ ಬೋಟಿಂಗ್ , ಮಕ್ಕಳಿಗೆ ಆಡಲು ಜಾಗ ಹಾಗು ವಿಹಾರಕ್ಕೆಂದು ಚಿಕ್ಕ ಪಾರ್ಕ್ ಇದೆ. ಹಾಗೆಯೆ ಒಂದು ಆಕ್ವೆರಿಯಮ್ ಕೂಡ ಇದೆ. ಪ್ರವೇಷ ದರ ಕೊಟ್ಟು ಒಳಗೆ ಹೋದೆವು. ಆಗಲೆ ಬೋಟಿಂಗಗೆ ಬಹಳ ಜನ ಕಾದು ಕುಳಿತ್ತಿದ್ದರಿಂದ ನಾವು ಆ ಪ್ಲಾನ್ ಬಿಟ್ಟು ಆಕ್ವೆರಿಯಮ್ ನೋಡಲು ತೆರೆಳಿದೆವು. ಅಂತಹ ಹೇಳಿಕೊಳ್ಳುವಂತಹ ವಿಶೇಷ ಮೀನುಗಳು ಅಲ್ಲಿ ಇರಲ್ಲಿಲ್ಲ. ಒಮ್ಮೆ ನೋಡಲು ಪರವಾಗಿಲ್ಲ ಅನ್ನಿಸಿತು.







ಪಾರ್ಕಿನಲ್ಲಿ ಸ್ವಲ್ಪ ಹೊತ್ತು ಕುಳಿತು ಮುಂದೆ ಬಾಣಾಸುರ ಆಣೆಕಟ್ಟೆಗೆ ತೆರೆಳಿದೆವು.

(ಸಶೇಷ..)

Wednesday, February 24, 2010

ವಯನಾಡ್ ಪ್ರವಾಸ

ಮದುವೆಯ ನಂತರ ಬಹಳ ದಿನದಿಂದ ಎಲ್ಲಾದರು ಟ್ರಿಪ್ ಗೆ ಹೋಗಬೇಕು ಅಂತ ಪ್ಲಾನ್ ಮಾಡ್ತಾನೆ ಇದ್ದೆ.ಆದರೆ ಕೆಲಸದ ನಡುವೆ ಹೋಗಲು ಆಗಿರಲಿಲ್ಲ. ಅಂತೂ ಎರಡು ತಿಂಗಳ ನಂತರ ಶಿವರಾತ್ರಿ ರಜಾ ಸಮಯದಲ್ಲಿ ಎಲ್ಲಾದರು ಹೋಗುವ ಪ್ಲಾನ್ ಮಾಡಿದೆ. ಸರಿ ಪ್ಲಾನ್ ಆಯ್ತು ಇಬ್ರೆ ಹೋಗೊಕೆ ಬೇಜಾರು ಅದಿಕ್ಕೆ ನನ್ನ ಮಡದಿಯ ಅಕ್ಕ ಭಾವನವರನ್ನು ಆಮಂತ್ರಿಸಿದೆ . ಅವರು ಬರಲು ಒಪ್ಪಿದರು..ಆದರೆ ಹೋಗುವುದು ಎಲ್ಲಿಗೆ? ನಾನು ಮತ್ತು ನನ್ನ ಶಡ್ಕ [ ಮಡದಿಯ ಅಕ್ಕನ ಗಂಡ ] ಇಬ್ಬರು ಎರಡು ದಿನ ಇಂಟರ್ನೆಟ್ ನಲ್ಲಿ ಪ್ರವಾಸಿ ತಾಣಗಳ ಪುಟ ತಿರುವಿ ಹಾಕಿದ್ದೇ ಹಾಕಿದ್ದು .. ಕೆಲವು ಜಾಗಗಳನ್ನು ಎಲ್ಲರು ನೋಡಿಯಾಗಿದೆ . ಕೆಲವು ಜಾಗಕ್ಕೆ ಈಗ ಹೋಗಲಾಗುವುದಿಲ್ಲ..ಅಂತು ಕಡೆಯಲ್ಲಿ ವಯನಾಡ್ [ ಕೇರಳ ] ಗೆ ಹೋಗುವುದು ಅಂತ ತೀರ್ಮಾನವಾಯಿತು.ಅಷ್ಟೇ ಅಲ್ಲದೆ ಅವರ ಕಾರಿನಲ್ಲೆ ಹೋಗುವುದು ಅಂತಾ ಕೂಡಾ ತೀರ್ಮಾನವಾಯಿತು.

ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ನಮ್ಮ ಪ್ರಯಾಣ ಪ್ರಾರಂಭವಾಯಿತು. ಸರಿಯಾಗಿ ೮ ಗಂಟೆಗೆ ಚನ್ನಪಟ್ಟಣದ ಹತ್ತಿರ ಹೋಟೆಲ್ ಕದಂಬದಲ್ಲಿ ನಮ್ಮ ಬೆಳಗಿನ ಉಪಹಾರ. ಅದು ಸಿದ್ದಾಪುರ ಕಡೆಯವರ ಹೊಟೆಲ್. ಆ ಹೊಟೇಲ್ ಅಣ್ಣನ [ ಶಡ್ಕನನ್ನು ಹೀಗೆ ಕರೆಯುತ್ತೇನೆ] ಪರಿಚಯದವರದ್ದೆ ಅಂತೆ. ಬೆಳಿಗ್ಗೆ ಬೇಗ ಹೊರಟಿದ್ದರಿಂದ ಹೊಟ್ಟೆ ಒಂದೆ ಸಮನೆ ತಾಳ ಹಾಕುತ್ತಿತ್ತು. ಹೋಟೆಲನಲ್ಲಿ ಸಕತ್ತ್ ಬ್ಯಾಟಿಂಗ್ ಮಾಡಿದ್ದೆ ಮಾಡಿದ್ದು. ಮಸಾಲೆದೋಸೆ, ಇಡ್ಲಿ ವಡಾ , ಚಹಾದ ನಂತರ ನಮ್ಮ ಪ್ರಯಾಣ ಮುಂದುವರೆಯಿತು. ಮೈಸೂರ್, ಗುಂಡ್ಲುಪೇಟೆ ದಾಟುವರೆಗೆ ಎಲ್ಲಿಯೂ ಮಧ್ಯೆ ಕಾರ್ ನಿಲ್ಲಿಸಲಿಲ್ಲ. ಗುಂಡ್ಲುಪೇಟ್ ದಾಟುವ ಹೊತ್ತಿಗಾಗಲೆ ಸೂರ್ಯ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿದ್ದ ಅದಕ್ಕೆ ಅಲ್ಲಿಯೆ ಒಂದು ಕಡೆ ಎಳನೀರಿನ ಸೇವನೆಯನ್ನು ಮುಗಿಸಿ ಅಲ್ಲಿಂದ ಮತ್ತೆ ಪಯಣ ವಯನಾಡ್ ಕಡೆಗೆ ಪ್ರಾರಂಭವಾಯಿತು. ಆಗಲೆ ಸಮಯ ೧೦.೩೦ ಕೇರಳ ಬಾರ್ಡರ್ ದಾಟಿಯಾಗಿದೆ ,ಇನ್ನು ವಯನಾಡ್ ತಲುಪುವವರೆಗೂ ಎಲ್ಲಿಯೂ ನಿಲ್ಲಿಸಿಬಾರದೆಂದು ತೀರ್ಮಾನಿಸುತ್ತಿದ್ದಂತೆಯೆ ಕಾರ್ ನಿಲ್ಲಿಸುವ ಪ್ರಸಂಗ ಎದುರಾಯಿತು ಏಕೆಂದರೆ ೪-೫ ಕಾಡಾನೆಗಳ ಗುಂಪೊಂದು ರಸ್ತೆ ದಾಟುತ್ತಿತ್ತು. ಈ ರಸ್ತೆಯಲ್ಲಿ ಪ್ರಾಣಿಗಳ ಸಂಚಾರ ಸರ್ವೆ ಸಾಮಾನ್ಯ , ಈ ಕುರಿತು ರಸ್ತೆಯ ಇಕ್ಕೆಲೆಗಳಲ್ಲು ಸೂಚನ ಫಲಕಗಳನ್ನು ಕಾಣಬಹುದು. ಆನೆಯನ್ನು ಕಾಣುತ್ತಿದ್ದಂತೆ ಉಳಿದವರಂತೆ ನಾವು ಕಾರನ್ನು ನಿಲ್ಲಿಸಿದೆವು. ನಾನು ಗಡಬಡೆಯಲ್ಲಿ ಇಳಿದು ಆನೆಯ ಫೋಟೊ ಕ್ಲಿಕ್ಕಿಸಲು ನನ್ನ ಹೊಚ್ಚ್ ಹೊಸ ಕ್ಯಾಮರಾ [Cannon PowerShot SX120 IS ] ಹಿಡಿದು ಓಡಿದೆ. ಹತ್ತಿರ ಹೋಗಿ ಕ್ಲಿಕ್ಕಿಸಬೇಕೆಂದು ಕೊಂಡಿದ್ದರು ಆನೆಗಳು ಮರ ಮುರಿಯುವ ಶಬ್ದಕ್ಕೆ ಹಾಗು ಸಾಗುತ್ತಿರುವ ವೇಗಕ್ಕೆ ಹೆದರಿಕೆಯಾಗಿ ಎಲ್ಲರು ದೂರದಿಂದಲೆ ಫೋಟೊ ತೆಗೆದುಕೊಂಡೆವು.








ಅಲ್ಲಿಂದ ಮುಂದೆ ನಾವು ಕೇರಳದ ಗಡಿಯಲ್ಲಿರುವ ಹಳ್ಳಿ , ಪೇಟೆಗಳನ್ನು ದಾಟುತ್ತ ಸುಲ್ತಾನ ಬತೇರಿ ಎಂಬ ಜಾಗಕ್ಕೆ ತಲುಪಿದೆವು. ಮೊದಲೆ ಎಲ್ಲೆಲ್ಲಿ ಹೋಗಬೇಕು ಎಂದು ಒಂದು ಪಟ್ಟಿ ಸಿದ್ದಪಡಿಸಿಕೊಂಡಿದ್ದೆವು. ಸುಲ್ತಾನ್ ಬತೇರಿ ಟಿಪ್ಪು ಸುಲ್ತಾನನ ಯುದ್ಧ ಸಾಮಗ್ರಿಗಳನ್ನು ಶೇಖರಿಸಿಡುವ ಸ್ಥಳವಾಗಿತ್ತಂತೆ. ಇಲ್ಲಿ ಒಂದು ಟಿಪ್ಪು ಸುಲ್ತಾನನ ಕೋಟೆಯಿದೆ ಎಂದು ನಮಗೆ ನಂತರ ತಿಳಿಯಿತು ಆದ್ದರಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಸುಲ್ತಾನ ಬತೇರಿಗೆ ಬರುತ್ತಿದ್ದಂತೆ ಮೊದಲಿಗೆ ಜೈನ್ ಟೆಂಪಲ್ ಗೆ ಹೋದೆವು.ಇಲ್ಲಿ ಶಿಥಿಲಗೊಂಡ ಒಂದು ಚಿಕ್ಕ ಬಸದಿಯಿದೆ. ಎದುರಿನ ಕಲ್ಲು ಮಂಟಪ ಶಿಥಿಲಗೊಂಡಿದ್ದರೂ ಆಕರ್ಷಣೀಯವಾಗಿದೆ.ಹೋಗುವ ದಾರಿಯಲ್ಲು ಚಿಕ್ಕ ಸುಂದರ ಹೂದೋಟವು ಇದೆ.








ನಮ್ಮ ಮುಂದಿನ ಸ್ಥಳ ಎಡಕಲ್ ಗುಹೆ. ಇದು ಹೆಸರಿಗೆ ಮಾತ್ರ ಗುಹೆ , ಆದರೆ ನಿಜವಾದ ಗುಹೆಯಲ್ಲ , ಎರಡು ದೊಡ್ದ ಕಲ್ಲು ಬಂಡೆಯ ಮೇಲೆ ಮತ್ತೊಂದು ಕಲ್ಲು ಬಿದ್ದು ಛಾವಣಿಯಂತೆ ಮುಚ್ಚಿ ಗುಹೆಯ ರೂಪವನ್ನು ಕೊಟ್ಟಿದೆ.



ಅಲ್ಲಿಗೆ ತಲುಪುವ ನಮ್ಮ ಹಾದಿ ಸುಲಭವಾಗಿರಲಿಲ್ಲ . ಅಂದರೆ ರಸ್ತೆ ಕೆಟ್ಟದ್ದಾಗಿತ್ತು ಅಂತಲ್ಲ , ಹೋಗುವ ದಾರಿ ಸ್ವಲ್ಪ ವ್ಯತ್ಯಾಸವಾಗಿ ತಲುಪುವುದು ಸ್ವಲ್ಪ ಕಷ್ಟವಾಯಿತು. ಮೊದಲೇ ಭಾಷೆ ಬರದ ಊರು. ಆದರು ತಿಳಿದ ಅರೆಬರೆ ತಮಿಳ್ , ಮಲಯಾಲಮ್ ಭಾಷೆ ಪ್ರಯೋಗಿಸಿ ಅಂತು ತಲುಪಿದೆವು. ಸಮಯ ಸರಿಯಾಗಿ ೧ ಗಂಟೆ. ಹೊಟ್ಟೆ ಮತ್ತೆ ತಾಳ ಹಾಕುತ್ತಿದೆ, ಹೊಟೇಲಗಳು ಇರುತ್ತವೆ ಎಂಬ ಹುಂಬತನದಿಂದ ಏನೂ ಕೊಂಡೊಯ್ದಿರಲಿಲ್ಲ. ಹೊಟೇಲ್ಗಳು ಇದ್ದವು ಆದರೆ ಎಲ್ಲ ಮೀನು ಮಾಂಸಮಯ. ನಾವೋ ಹೋದವರೆಲ್ಲ ಶಾಖಾಹಾರಿಗಳು, ಆದರು ಒಂದು ಚಿಕ್ಕ ಕಾಕಾ ಹೊಟೇಲದಂತಕ್ಕೆ ನುಗ್ಗಿ ಒಂದಿಷ್ಟು ಆಹಾರ ಹೊಟ್ಟೆಗೆ ಹಾಕಿದ ಮೇಲೆ ಹುರುಪು ಬಂತು.
ಎಡಕಲ್ ಗುಹೆಗೆ ಹೋಗಲು ಸ್ವಲ್ಪ ದೂರ ನಡೆಯಬೇಕಾಗುತ್ತದೆ. ಮಧ್ಯಾನದ ಉರಿ ಬಿಸಿಲು , ಬಿಸಿ ಗಾಳಿ, ಹೋಗುತ್ತಿರುವ ಜಾಗ ಬೆಟ್ಟ. ಕೇಳಬೇಕೆ? ಯಾರು ನಡೆಯಲು ತಯಾರಿಲ್ಲ. ಅಲ್ಲಿಯವರಿಗೂ ಗೊತ್ತು ಹೀಗೆಲ್ಲ ಆಗುತ್ತೆ ಅಂತ ಅದಕ್ಕೆ ಬೆಟ್ಟದ ಬುಡದವರೆಗೆ ಜೀಪೀನ ವ್ಯವಸ್ಥೆ ಮಾಡಿದ್ದಾರೆ. ಸರಿ ಜೀಪಿಗೆ ೭೦ ರೂಪಾಯಿಗಳನ್ನು ಕೊಟ್ಟು ಮೇಲಿನವರೆಗೆ ಹೋಗಾಯಿತು. ಅಲ್ಲಿಂದ ಗುಹೆಗೆ ಹೋಗಲು ಪ್ರವೇಶ ದರ ಕೊಟ್ಟು ಬೆಟ್ಟ ಹತ್ತಲು ಪ್ರಾರಂಭಿಸಿದೆವು.ದಾರಿ ಅಷ್ಟೊಂದು ಸುಗಮವಲ್ಲ, ಕೇಲವೆಡೆ ಮೇಲೇರಲು ಸಾಹಸವನ್ನೇ ಮಾಡಬೇಕಾಯಿತು. ಮೇಲಕ್ಕೆರುವವರೆಗೂ ಉರಿಬಿಸಿಲು , ಮೈಯೆಲ್ಲ ಒದ್ದೆಯಾಗಿತ್ತು. ಆದರೆ ಗುಹೆಯನ್ನು ಪ್ರವೇಷಿಸುತ್ತಿದ್ದಂತೆ ಅಲ್ಲಿಯ ತಂಪಾದ ವಾತಾವರಣ ಆಯಾಸವನ್ನು ಮರೆಮಾಚಿತ್ತು. ಒಳಗೆ ಗುಹೆಯ ಇಬ್ಬದಿಯಲ್ಲು ಆದಿಮಾನವರು ಕೆತ್ತಿದ ಚಿತ್ತಾರಗಳಿವೆ. ಪ್ರತಿಯೊಂದು ಕೆತ್ತನೆಯೂ ಪ್ರಾಣಿ , ಮನುಷ್ಯ ಹಾಗು ಕೆಲವು ಚಿನ್ಹೆಗಳಂತೆ ತೋರುತ್ತಿದ್ದವು.ಇವೆಲ್ಲವನ್ನು ಬರಿಯ ಕಣ್ಣಲ್ಲಿ ಸೆರೆ ಹಿಡಿದಿದ್ದು ಸಾಲದೆಂದು ಕ್ಯಾಮರಾದಲ್ಲೂ ಸೆರೆ ಹಿಡಿಯುವ ಕೆಲಸ ನನ್ನದಾಯಿತು.



ನಾವೆಲ್ಲ ಅಷ್ಟು ಕಷ್ಟಪಟ್ಟು ಮೇಲೆ ಹತ್ತುತ್ತಿದ್ದರೆ ಒಂದು ಮಂಗ ತನ್ನ ಮಗುವನ್ನೂ ಹೊತ್ತುಕೊಂಡು ಲೀಲಾಜಾಲವಾಗಿ, ಅದೂ ಬಂಡೆಯ ಅಡ್ಡ ಮಗ್ಗುಲಲ್ಲಿ ಸಾಗುತ್ತಿತ್ತು.



ಆದಿಮಾನವರು ಕೆತ್ತಿದ ಚಿತ್ರಗಳು





ಬೆಟ್ಟದ ಭಾಗವನ್ನು ಇನ್ನಷ್ಟು ಭೇಧಿಸಬೇಕೆಂಬ ಆಸೆ ಇದ್ದರು ನಮ್ಮ ಮುಂದಿನ ಜಾಗ ನಮ್ಮನ್ನು ಕೈ ಬೀಸಿ ಕರೆಯುತ್ತಿತ್ತು . ಪ್ರಕೃತಿಯ ಸೌಂದರ್ಯವನ್ನು ಸವಿಯಲು ನಾವು ಮೀನಮುಟ್ಟಿ ಜಲಪಾತಕ್ಕೆ ಹೊರಟೆವು.

(ಸಶೇಷ.. )

Thursday, January 7, 2010

ಯಶಸ್ಸಿನತ್ತ ಪಯಣ

[ ಚಿತ್ರ:ಗೂಗಲ್ ಇಮೆಜಸ್ ]



ಯಶಸ್ಸಿನತ್ತ ಪಯಣ..
ಸುಗಮವೋ ದುರ್ಗಮವೋ
ನಾನರಿಯೆ;
ಅಭೆಧ್ಯವೇನಲ್ಲ , ಅಸಾಧ್ಯವು ಅಲ್ಲ


ಒಂದೊಂದೇ ಮೆಟ್ಟಿಲೇರುತ್ತ
ತಲುಪಬೇಕು ಉತ್ತುಂಗದತ್ತ




ಹನಿಹನಿಕೂಡಿದರೆ ಹಳ್ಳ
ಮನಸ್ಸೊಂದಿದ್ದರೆ ಸಾಧ್ಯವೂ ಎಲ್ಲಾ,
ಕಣ ಕಣವೂ ಸಾರುತ್ತಿದೆ
ಇದು ನನ್ನಿಂದ ಸಾಧ್ಯ ....ಸಾಧ್ಯ....

ಇಂದು ಇಲ್ಲಿ, ನಾಳೆ ಅಲ್ಲಿ
ರವಷ್ಟಾದರೂ ಪ್ರಗತಿ ...

ಆಹಾ! ಕಾಣುತ್ತಿದೆ ದೂರದಲ್ಲಿ
ಅಭಿವೃದ್ಧಿಯ ಬೆಳಕು
ಆದರೂ ಮನದ ಮೂಲೆಯಲ್ಲಿ,
ಹುದುಗಿಹುದು ಅಳುಕು....

ಯಶಸ್ಸಿನತ್ತ ಪಯಣ, ಒಂದೇ ಪ್ರಶ್ನೆ
ಈಗ ನಾನಿರುವುದೆಲ್ಲಿ?