Tuesday, March 23, 2010

ವಯನಾಡ್ ಪ್ರವಾಸ -- ೨

[ ಕೆಲಸದ ಒತ್ತಡದಿಂದ ಕೆಲವು ದಿನಗಳಿಂದ ಬ್ಲೊಗ್ ಲೋಕಕ್ಕೆ ಬಂದಿರಲಿಲ್ಲ.. ಅದಕ್ಕೆ ಎರಡನೆಯ ಭಾಗ ಪ್ರಕಟಿಸಲು ಸ್ವಲ್ಪ ಸಮಯ ಹೀಡಿಯಿತು. ಮುಂದಿನ ಭಾಗವನ್ನು ಬೇಗನೆ ಹಾಕುವೆ ... ]

ಎಡಕಲ್ ಗುಹೆಯಿಂದ ಮತ್ತೆ ಜೀಪನ್ನು ಹತ್ತಿ ಕೆಳಗೆ ಬಂದರೆ ಉರಿಬಿಸಿಲು ತನ್ನ ಪ್ರತಾಪವನ್ನು ತೊರಿಸಯೇ ಬಿಟ್ಟಿತ್ತು. ನಾವು ಪಾರ್ಕ ಮಾಡಿದ ಕಾರು ಎಷ್ಟು ಬಿಸಿಯಾಗಿತ್ತೆಂದರೆ ಬಾಗಿಲು ತೆರೆಯುತ್ತಿದ್ದಂತೆ ಬಿಸಿ ಗಾಳಿ ಮುಖಕ್ಕೆ ತಾಗಿ ಒಮ್ಮೆ ಚುರ್ ಎಂದಿತು. ಸ್ವಲ್ಪ ಹೊತ್ತು ಎಸಿ ಹಚ್ಚಿಟ್ಟು ತಂಪು ಪಾನೀಯ ಕುಡಿದು ಅಲ್ಲಿಂದ ಹೊರಟೆವು.

ಮುಂದಿನ ಸ್ಥಳ ಫ್ಯಾಂಟಮ್ ರಾಕ್ .. ಒಂದು ಕಲ್ಲು ಬೆಟ್ಟ ನೋಡಲು ಪಕ್ಕಾ skull ತರ ಇದೆ. ಅದಕ್ಕೆ ಇಲ್ಲಿಯವರು
ಫ್ಯಾಂಟಮ್ ರಾಕ್ ಅಂತಾ ನಾಮಕರಣ ಮಾಡಿರಬೇಕು. ಅದೊಂದು ಬೆಟ್ಟ ಬಿಟ್ಟು ಸುತ್ತಲು ಶಿಲೆ ಕಲ್ಲನ್ನು ಎತ್ತುವ ಗಣಿ ಕಾರ್ಯ
ನಡೆಯುತ್ತಿದೆ. ಇನ್ನು ಕೆಲವೆ ವರ್ಷಗಳಲ್ಲಿ ಈ ಫ್ಯಾಂಟಮ್ ರಾಕ್ ಮಾಯವಾದರು ಆಗಬಹುದು.


[ phantom Rock ]ಅಲ್ಲಿಂದ ಮುಂದೆ ನಾವು ಹೋಗಿದ್ದು ಒಂದು ಮ್ಯೂಸಿಯಮ್ ಗೆ . ಅಲ್ಲಿ ಒಂದು ಟ್ರೈಬಲ್ ಕಮ್ಯೂನಿಟಿಯವರು ಉಪಯೋಗಿಸುತ್ತಿದ್ದ
ಗೃಹ ಮತ್ತು ವ್ಯವಾಸಾಯ ಉಪಕರಣಗಳು ಹಾಗು ಹಲವು ಮೂರ್ತಿಗಳನ್ನು ವೀಕ್ಷಣೆಗೆ ಇಡಲಾಗಿದೆ.ಇವೆಲ್ಲವು ಮೀನಮುಟ್ಟಿ ಜಲಪಾತಕ್ಕೆ ಹೋಗುವ ದಾರಿಯಲ್ಲಿ ಇರುವುದರಿಂದ ಒಮ್ಮೆ ಭೇಟಿ ಕೊಟ್ಟು ಮುಂದೆ ಸಾಗಿದೆವು.

ಆಗಲೇ , ಸಮಯ ೪ ಗಂಟೆ. ಇಲ್ಲಿ ಎಲ್ಲ ಸ್ಥಳಗಳು ಸಾಯಂಕಾಲ ೫ ಗಂಟೆ ಒಳಗೆ ಮುಚ್ಚುತ್ತವೆ ಎಂದು ಮೊದಲೆ ಒಬ್ಬರು ಹೇಳಿದ್ದರು
ಆದ್ದರಿಂದ ಮಾರ್ಗ ಮಧ್ಯ ಬರುವ ಇನ್ನು ಹಲವು ಚಿಕ್ಕ ಸ್ಥಳಗಳನ್ನು ಬಿಟ್ಟು ಮೀನಮುಟ್ಟಿಗೆ ತಲುಪಿದೆವು.
ಈ ಜಾಗ ಕೇರಳದಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಇದೆ. ಹೈವೆ ಇಂದ ಸುಮಾರು ಎರಡು ಕಿಲೊಮೀಟರ್ ಒಳಗೆ ಹೋದರೆ ಒಂದು ಸುಂದರ ಕಾಪಿ ಹಾಗು ಟೀ ಎಸ್ಟೇಟ್ ಸಿಗುತ್ತದೆ.ಅಲ್ಲಿ ಕಾರ್ ಪಾರ್ಕ್ ಮಾಡಿದೆವು. ಫಾಲ್ಸ್ ಗೆ ಹೋಗಲು ಪ್ರವೇಷ ದರ ೧೦ ಹಾಗು ಅದಕ್ಕಿಂತ ಕಮ್ಮಿ ಜನರಿದ್ದಲ್ಲಿ ೩೦೦ ರುಪಾಯಿಗಳು . ಸಹಾಯಕರಾಗಿ ಒಬ್ಬ ಗಾರ್ಡ ಕೂಡ ಬರುತ್ತಾರೆ. ಅವರಿಗೆ ಇಷ್ಟ ಬಂದಷ್ಟು ಟಿಪ್ಸ್ ಕೊಡಬಹುದು.[ Tea estate]


ಜಲಪಾತ ಕೇವಲ ಒಂದು ಅರ್ಧ ಕೀಮಿ ದೂರ ಆದರೆ ದಾರಿ ಸುಗಮವಾಗಿರಲಿಲ್ಲ.ಮೊದಲು ಕಾಪಿ ಎಸ್ಟೇಟ್ ಮಧ್ಯ ಹಾದು ಹೋಗುಬೇಕು. ಮುಂದೆ ಮುಂದೆ ಸಾಗುತ್ತಿದ್ದಂತೆ ಅಪಾಯದ ಅರಿವಾಗುತ್ತದೆ. ಒಂದು ಕಡೆ ಮಾತ್ರ ಹಿಡಿಯಲು ಅವಕಾಶ ಮತ್ತೊಂದೆಡೆ ಪ್ರಪಾತ.ಕೆಲವು ಕಡೆಯಂತು ಕೇವಲ ಒಂದು ಹಗ್ಗದ ಸಹಾಯದಿಂದ ನಿಧಾನ ಇಳಿಯ ಬೇಕು. ಅಂತು ಇಂತು ಹಲವು ಕಡೆ ಕುಳಿತು , ಬಿದ್ದು ಎದ್ದು ಜಲಪಾತದ ಹತ್ತಿರ ತಲುಪಿದೆವು. ಅಬ್ಬಾ ಎಂತಹ ಸುಂದರ ದೃಶ್ಯ. ನಿಜಕ್ಕೂ ಅಷ್ಟು ನಡೆದು ಬಂದದ್ದು ಸಾರ್ಥಕ ಎನಿಸುವಷ್ಟು ಮನಮೋಹಕವಾಗಿದೆ. ಇಲ್ಲಿ ಒಂದು ವಿಶೇಷವೆಂದರೆ , ಜಲಪಾತದ ಒಂದು ಭಾಗದ ಬೆಟ್ಟ ಕೇರಳಕ್ಕೆ ಸೇರಿದ್ದು ಇನ್ನೊಂದು ಭಾಗ ತಮಿಳುನಾಡಿನದು. ಎರಡು ಗುಡ್ಡಗಳ ನಡುವೆ ಈ ಜಲಪಾತ , ತುದಿಯಲ್ಲಿ ದೊಡ್ಡ ಪ್ರಪಾತ.


ಹೋಗುವಾಗ ಯಾರು ನೀರಿಗೆ ಇಳಿಯುವುದು ಬೇಡ , ಬೇಗನೆ ನೋಡಿ ಬಂದು ಬಿಡೋಣವೆಂದು ನಿರ್ಧರಿಸಿದ್ದೆವು .. ಆದರೆ ಅಲ್ಲಿ ಹೋದ ಮೇಲೆ ನೀರಾಟವಾಡದೆ ಮೇಲೆ ಹೋಗಲು ಮನಸ್ಸು ಕೇಳಲೆ ಇಲ್ಲ .. ನಾವು ಮೂರು ಜನ ಗಂಡಸರು ಹಾಗು ಅಣ್ಣನ ೪ ವರ್ಷದ ಮಗುವನ್ನು ಹಿಡಿದು ನಿಧಾನವಾಗಿ ನೀರಿನಲ್ಲಿ ಈಜುತ್ತ ಜಲಪಾತ ಬೀಳುವಲ್ಲಿಗೆ ತಲುಪಿದೆವು. ನೀರು ಎಷ್ಟು ರಭಸವಾಗಿ ಬೀಳುತ್ತಿತ್ತೆಂದರೆ , ಮೈ ಮೇಲೆ ಬಿದ್ದ ನೀರು ಮಸ್ಸಾಜ್ ಮಾಡಿದಂತಾಗಿ ನೋವೆಲ್ಲ ಮಾಯವಾಗಿ ಹೋಗಿತ್ತು. ಹೆಂಗಸರು ಅಲ್ಲೆ ಹತ್ತಿರದಲ್ಲಿ ನೀರಿಗಿಳಿದು ಸ್ವಲ್ಪ ಹೊತ್ತು ಆಡಿದರು. ಅಲ್ಲಿ ಬಹಳಷ್ಟು ಜನರಿದ್ದರಿಂದ ಜಾಗ ಸ್ವಲ್ಪ ಇಕ್ಕಟ್ಟಾಗಿತ್ತು. ಅಲ್ಲಿ ಎರಡು ಜನ ಗಾರ್ಡ್ಸ್ ನೀರಿನಲ್ಲಿ ಅಪಾಯವಾಗದಂತೆ ನೋಡಿಕೊಳ್ಳಲ್ಲೆಂದೆ ಇರುವುದರಿಂದ ಭಯವನ್ನು ಸ್ವಲ್ಪ ಬದಿಗಿಟ್ಟು ನೀರಾಟವಾಡಿ ಮಜಾ ಮಾಡಿದೆವು.

[ This photo is taken standing almost below the falls .. few water drops fell on the lens , luckily nothing happened to camera :) ]


ಆಗಾಲೆ ಸೂರ್ಯ ಮುಳುಗುವ ಹೊತ್ತಾಗಿದ್ದರಿಂದ ಗಾರ್ಡ ಎಲ್ಲರನ್ನು ಮೇಲೆಕ್ಕೆ ಕಳಿಸುತ್ತಿದ್ದ. ನಾವು ಎಲ್ಲರೊಡಗೂಡಿ ಮೇಲಕ್ಕೆ ಹೋರಟೆವು. ಮೇಲಕ್ಕೆ ಹತ್ತುವುದು ಕೆಳಗೆ ಇಳಿಯುವುದಕ್ಕಿಂತ ಮತ್ತೂ ಕಷ್ಟವೆನಿಸ ತೊಡಗಿತ್ತು. ಅಂತು ಇಂತು ಮೇಲೇರಿ ಬರುವಷ್ಟರಲ್ಲಿ ಸೂರ್ಯ ನಿಧಾನವಾಗಿ ಪಶ್ಚಿಮಕ್ಕೆ ಜಾರುತ್ತಿದ್ದ.. ನಾನು ಕ್ಯಾಮರಾ ತೆಗೆದು ಒಂದಿಷ್ಟು ಫೊಟೊ ಕ್ಲಿಕ್ಕಿಸಿದೆ. ಎಷ್ಟು ಸುಸ್ತಾಗಿತ್ತೆಂದರೆ ಕ್ಯಾಮರ ಹಿಡಿದ ಕೈ ನಡುಗುತ್ತಿತ್ತು.

ಮೇಲೆ ಸ್ವಲ್ಪ ಹೊತ್ತು ವಿರಮಿಸಿ ಗಾರ್ಡಗೆ ವಿಧಾಯ ಹೇಳಿ ರಾತ್ರಿ ತಂಗಲು ಕಾಲ್ಪೆಟ್ಟ ಎಂಬ ಊರಿನತ್ತ ತೆರಳಿದೆವು. ಹೋಟೆಲ್ ವುಡಲ್ಯಾಂಡಿನಲ್ಲಿ ಮೋದಲೆ ರೂಮ್ ಕಾದಿರಿಸಿದ್ದರಿಂದ ಏನು ತೊಂದರೆ ಇರಲಿಲ್ಲ. ಅಲ್ಲಿ ತೆರ‍ಳಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದಾಗಲೇ ಮೈ ಮನಸ್ಸಿಗೆ ಸ್ವಲ್ಪ ಹಾಯ್ ಅನಿಸಿದ್ದು.ಊಟ ಮಾಡಿ ಮಲಗಿದ್ದೊಂದೆ ಬೆಳಗ್ಗೆ ಅಲಾರ್ಮ್ ಬಡಿದು ಕೊಂಡಾಗಲೆ ಎಚ್ಚರವಾದದ್ದು.
ಎದ್ದು ಬೆಳಗಿನ ಕಾರ್ಯವನ್ನೆಲ್ಲ ಮುಗಿಸಿ ತಿಂಡಿ ತಿನ್ನಲು ಹಿಂದಿನ ರಾತ್ರಿಯೇ ನೋಡಿಟ್ಟಿದ್ದ ಉಡುಪಿ ಹೋಟೆಲಗೆ ನುಗ್ಗಿದೆವು.
ತಿಂಡಿ ತಿನ್ನುತ್ತ ಹೋಟೆಲನವರ ಸಹಾಯದಿಂದ ಅಂದು ನೋಡಬೇಕಾದ ಸ್ಥಳಗಳ ಪಟ್ಟಿ ಸಿದ್ದವಾಯಿತು. ಅಲ್ಲಿ ನಮಗೆ ಕನ್ನಡ ಮಾತನಾಡುವವರು
ಸಿಕ್ಕಿದ್ದರಿಂದ ಮುಂದಿನ ಕಾರ್ಯಕ್ರಮ ರೂಪಿಸಲು ಮತ್ತೂ ಅನುಕೂಲವಾಯಿತು. ಹಿಂದಿನ ದಿನ ಪೂರ್ತಿ ಕೇವಲ ಬೆಟ್ಟ ಗುಡ್ಡ . ಚಾರಣದ ಜಾಗಗಳನ್ನು ನೋಡಿದ್ದರಿಂದ ಇಂದು ಸ್ವಲ್ಪ ಆರಾಮ ಎನಿಸುವ ಜಾಗಗಳನ್ನು ನೋಡುವುದು ಎಂದು ಮಾತಾಡಿಕೊಂಡೆವು.

ಗಡದ್ದಾಗಿ ತಿಂಡಿ ತಿಂದು , ಬಿಸಿ ಬಿಸಿ ಚಹ ಕುಡಿದು ಅಲ್ಲಿಂದ ನೇರವಾಗಿ ಪೂಕೊಡ್ ಲೇಕ್ ಎಂಬಲ್ಲಿಗೆ ಬಂದೆವು. ಇಲ್ಲಿ ಬೋಟಿಂಗ್ , ಮಕ್ಕಳಿಗೆ ಆಡಲು ಜಾಗ ಹಾಗು ವಿಹಾರಕ್ಕೆಂದು ಚಿಕ್ಕ ಪಾರ್ಕ್ ಇದೆ. ಹಾಗೆಯೆ ಒಂದು ಆಕ್ವೆರಿಯಮ್ ಕೂಡ ಇದೆ. ಪ್ರವೇಷ ದರ ಕೊಟ್ಟು ಒಳಗೆ ಹೋದೆವು. ಆಗಲೆ ಬೋಟಿಂಗಗೆ ಬಹಳ ಜನ ಕಾದು ಕುಳಿತ್ತಿದ್ದರಿಂದ ನಾವು ಆ ಪ್ಲಾನ್ ಬಿಟ್ಟು ಆಕ್ವೆರಿಯಮ್ ನೋಡಲು ತೆರೆಳಿದೆವು. ಅಂತಹ ಹೇಳಿಕೊಳ್ಳುವಂತಹ ವಿಶೇಷ ಮೀನುಗಳು ಅಲ್ಲಿ ಇರಲ್ಲಿಲ್ಲ. ಒಮ್ಮೆ ನೋಡಲು ಪರವಾಗಿಲ್ಲ ಅನ್ನಿಸಿತು.ಪಾರ್ಕಿನಲ್ಲಿ ಸ್ವಲ್ಪ ಹೊತ್ತು ಕುಳಿತು ಮುಂದೆ ಬಾಣಾಸುರ ಆಣೆಕಟ್ಟೆಗೆ ತೆರೆಳಿದೆವು.

(ಸಶೇಷ..)