Friday, July 30, 2010

ಕನ್ನಡ ಜಾಗೃತಿಗೊಂದು ಪ್ರಯತ್ನ- ಅಂಗಡಿಯಲ್ಲಿ ಕನ್ನಡ ನುಡಿ.

ಇಂದು ಮಧ್ಯಾನ ಊಟ ಮುಗಿಸಿ ಬರುತ್ತಿರುವಾಗ ನನ್ನ ಮೇನೆಜರ್ "ಶ್ರೀಧರ ಇಲ್ಲಿ ಬನ್ರಿ , ನಿಮ್ಗೆನೋ ಕೊಡ್ಬೇಕು " ಅಂದ್ರು ..
ಅರೆ ಇದೆನಪ್ಪ .. ಎನಾದರು ಒಳ್ಳೆ ಸುದ್ದಿ ಇದ್ಯ ಅಂತ ಹೋದ್ರೆ ಒಂದು ಪುಸ್ತಕ ಕೈಗೆ ಹಿಡ್ಸಿದ್ರು ..
ಬರಿ ಪುಸ್ತಕಾನಾ ಅಂತ ನಿರಾಸೆ ಆಗಿಲ್ಲ ಯಾಕೆ ಗೊತ್ತ ಅವರು ಕೊಟ್ಟಿದ್ದು ಒಂದು ಕನ್ನಡದ ಪುಸ್ತಕ.

ಕೆಲಸದ ಮಧ್ಯೆಯೆ ಬಿಡುವು ಮಾಡಿಕೊಂಡು ಪುಸ್ಕವನ್ನು ಓದಿ ಮುಗಿಸಿದೆ ..ಇಷ್ಟವಾಯ್ತು .. ಎಲ್ಲರಿಗೂ ತಿಳಿಸೋಣ ಅನ್ನಿಸ್ತು ..
ಕೆಲವರಿಗೆ ಇದರ ಬಗ್ಗೆ ಈಗಾಗಲೇ ತಿಳಿದಿರಬಹುದು ..

ಪುಸ್ತಕ ವಿವರಣೆ ಹೀಗಿದೆ ..

ಹೆಸರು: ಅಂಗಡಿಯಲ್ಲಿ ಕನ್ನಡ ನುಡಿ ..
ಬರೆದವರು: ರೋಹಿತ್ ಬಿ ಆರ್
ಪ್ರಕಾಶನ ಮತ್ತು ಹಕ್ಕುಗಳು: ಬನವಾಸಿ ಬಳಗ , ಟಾಟಾ ಸಿಲ್ಕ್ ಫಾರ್ಮ್ , ಬೆಂಗಳೂರು.
ಪುಟಗಳು:೫೬

ಹೇಸರೆ ಹೆಳುವಂತೆ ಈ ಪುಸ್ತಕ ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿಗತಿಗಳ ಬಗ್ಗೆ ತಿಳಿಸಿತ್ತದೆ .. ಜೊತೆಗೆ ಪರಿಹಾರವು ಇದೆ ..

ಮುನ್ನುಡಿಯಲ್ಲಿ ಹೇಳಿರುವಂತೆ ಕನ್ನಡಿಗರಲ್ಲಿ ತುರ್ತಾಗಿ ಜಾಗೃತಿ ಆಗಬೇಕಾದ ಕ್ಷೇತ್ರಗಳತ್ತ ಕಣ್ಣು ಹಾಯಿಸಿದರೆ ಕಾಣಿಸುತ್ತಿರುವುದು ಮಾರುಕಟ್ಟೆಯಲ್ಲಿ ಗ್ರಾಹಕರ ಸೇವೆಯಲ್ಲಿನ ಕನ್ನಡದ ಬಳಕೆಯ ಕುಂದುಕೊರತೆಗಳು.

ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಹೊತ್ತಿಗೆ ಸಹಾಯವಾಣಿಯಾಗಿ ಕೆಲಸ ಮಾಡುತ್ತದೆ. ಇಲ್ಲಿ ಹೊತ್ತಿಗೆಯಲ್ಲಿ ಅದಿಲ್ಲ , ಇದಿಲ್ಲ ಎಂದು ಗೋಳಿಡುವ ವಿಚಾರಗಳು ಇಲ್ಲ .. ಇವರು ಹೇಳುವುದು ಎನೇಂದರೆ ನಮ್ಮ ನಾಡಿನಲ್ಲೇ ನಮ್ಮ ಹಕ್ಕುಗಳಿಂದ ಕನಡಿಗರನ್ನು ಹೇಗೆ ವಂಚಿಸಲಾಗಿತ್ತಿದೆ ಎಂದು. ಕೆಲವು ವ್ಯಂಗ ಚಿತ್ರಗಳ ಮೂಲಕ , ಲಘು ಬರಹಗಳ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ.
ನಮ್ಮ ನಾಡಿನಲ್ಲಿ ಅದು ಸಿಗುತ್ತಿಲ್ಲ , ಇದು ಸಿಗುತ್ತಿಲ್ಲ ಎಂದು ಅಲವತ್ತು ಕೊಳ್ಳುವುದರ ಬದಲು ಮಾರುಕಟ್ಟೆಯಲ್ಲಿ , ನಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡದ ಹಕ್ಕೊತ್ತಾಯಕ್ಕೆ ಮುಂದಾಗೋಣ ಎನ್ನುವುದು ಇಲ್ಲಿನ ಧ್ಯೇಯವಾಗಿದೆ.
ಎಲ್ಲವು ಕನ್ನಡವೇ ಆಗಬೇಕೆಂದಲ್ಲ .. ಮುಖ್ಯವಾಗಿ ತಿಳಿಸುತ್ತಿರುವುದು ಸಾಮಾನ್ಯವಾದ ವಿಷಯಗಳಲ್ಲಿ .. ವ್ಯವಹಾರದಲ್ಲಿ ಕನ್ನಡವಿರಲಿ ಎಂಬುದು ಈ ಹೊತ್ತಿಗೆಯ ಉದ್ದೇಶವಾಗಿದೆ ..


ಕೆಲವು ಉದಾಹರಣೆಗಳು :
-- ಸೂಚನೆ ಹಾಗು ಸುರಕ್ಷತಾ ಮಾಹಿತಿಗಳು ಕನ್ನಡದಲ್ಲಿರಲಿ .. [ ಆಸ್ಪತ್ರೆ ಸೂಚೆನೆಗಳು , ತರೆವಾರಿ ದೈನಂದಿನ ಬಳಕೆಯ ವಸ್ತುಗಳು , ಅಡಿಗೆ ಅನಿಲ್ , ರೈಲ್ವೆ ಸೂಚನೆ ..ಸಾರಿಗೆ ಸೂಚನೆ.. ಹೀಗೆ ಹಲವು ಕಡೆ ಕನ್ನಡದ ಮಾಹಿತಿ ಸಾಮಾನ್ಯರಿಗೆ ಅಗತ್ಯ]
-- ಸಂಚಾರಿ ವ್ಯವಸ್ಥೆಯಲ್ಲಿ , ದೊಡ್ಡ ದಿನಸಿ ಸಂಕೀರ್ಣಗಳಲ್ಲಿ ದಿನಸಿ ಪದಾರ್ಥಗಳ ಹೆಸರು .. ಮಾಲ್ ಗಳಲ್ಲಿ ..ಚಿತ್ರ ಮಂದಿರದಲ್ಲಿ ಹೀಗೆ ಅನೇಕ ಕಡೆ ಕನ್ನಡದ ಅಗತ್ಯವಿದೆ ಎಂಬುದನ್ನ ಇಲ್ಲಿ ಚೆನ್ನಾಗಿ ವಿವರಿಸಲಾಗಿದೆ ..

ಕರ್ನಾಟಕದಲ್ಲಿ ಬರಿ ಕನ್ನಡಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ವ್ಯಾಪಾರ ವಹಿವಾಟು ಸಲೀಸಾಗಿ ಪೂರೈಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಹೇಳಲಾಗಿದೆ ..

ಪುಸ್ತಕದ ಕೊನೆಯಲ್ಲಿ ಬರೆದಿರುವ ಆಶಯ ವಾಖ್ಯ ಇಷ್ಟವಾಯ್ತು ,,

" ಈ ಹೊತ್ತಿಗೆ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಎನ್ನುವುದು ಬಳಗದ ಆಶಯ.
ಓದಿರಿ , ಜಾರಿಗೆ ತನ್ನಿ ,ಬದಲಾವಣೆಗೆ ಕಾರಣರಾಗಿ "

ನನ್ನ ಅನಿಸಿಕೆ ಎನೆಂದರೆ .. ನಿಜ ಹಲವು ಕಡೆ ಕನ್ನಡದ ಪರಿಸ್ಥಿತಿ ಚಿಂತಾಜನಕವಾಗಿದೆ ಹಾಗಂತ ಎಲ್ಲವನ್ನು ಬದಲಾಯಿಸುವುದು ಸಾಧ್ಯವಿಲ್ಲ ... ಪುಸ್ತಕದಲ್ಲಿ ಹೇಳಿರುವ ಎಲ್ಲ ವಿಷಯ , ಸ್ಥಳಗಳಲ್ಲಿ ಅಲ್ಲವಾದರು ..ಕೆಲವು ಕಡೆ ಕನ್ನಡ ಜಾಗೃತಿಯನ್ನು ಮೂಡುಸುವುದು ಅವಶ್ಯವಾಗಿದೆ. ಎಲ್ಲರೂ ಧ್ವನಿಗೂಡಿಸಿದರೆ ಇದು ಖಂಡಿತ ಸಾಧ್ಯ.

ಕೈಗೂಡಿಸ ಬಯಸುವುದಾದರೆ ಇಲ್ಲಿಗೆ ಬರೆಯಿರಿ ..
" jaagruta_graahakaru-subscribe@googlegroups.com "

ಹಲವರು ದೇಣಿಗೆ ನೀಡುವ ಮೂಲಕ ಹೊತ್ತಿಗೆ ಅಚ್ಚು ಹಾಕಿಸಲು ನೆರವಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಶ್ರೀ ಆನಂದ .ಜಿ ಅವರು ಮುನ್ನುಡಿಯಲ್ಲಿ ತಿಳಿಸಿದ್ದಾರೆ.[ anand@banavaasibalaga.org]

ಈ ಪುಸ್ತಕ , ಪುಸ್ತಕ ಮಳಿಗೆಗಳಲ್ಲಿ ಸಿಗವುದು ಇಲ್ಲವೋ ಎಂಬ ಮಾಹಿತಿ ಖಚಿತವಿಲ್ಲ ..
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಸಂಪರ್ಕಿಸ ಬಹುದೇನೊ

www.banavaasibalaga.org

kacheri@banavasibalaga.org

ಬಳಗದ ಬ್ಲೋಗ್
enguru.blogspot.com
karnatique.blogspot.com

ಮಾಹಿತಿಗಾಗಿ : http://enguru.blogspot.com/2010/05/angadiyalli-kannada-nudi.html

ಕನ್ನಡದ ಏಳಿಗೆಗಾಗಿ ನನ್ನದೂ ಒಂದು ಚಿಕ್ಕ ಪ್ರಯತ್ನವಷ್ಟೇ ... ಪುಸ್ತಕವನ್ನು ಪಡೆದು ಓದಿ .. ನಾವು ಸಹಕರಿಸೋಣ ..ಎನಂತೀರಿ ...

Monday, July 26, 2010

ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ



ಮಳೆಗಾಲ ಬಂತೆಂದರೆ ನಮ್ಮೂರಲ್ಲಿ , ಊರಿನ ಸುತ್ತಮುತ್ತ ಎಲ್ಲರೂ ಒಂದೊಂದು ರೀತಿಯ ಚಟುವಟಿಕೆಗಳಲ್ಲಿ ತೊಡಗಿ ಬಿಡುತ್ತಾರೆ. ಮಕ್ಕಳಿಗೆ ಶಾಲೆಗೆ ಹೋಗೊ ತಯಾರಿ, ಆಳುಗಳಿಗೆ ತೋಟ ಗದ್ದೆಯ ಕೆಲಸ, ತೋಟ ಇರುವವರ ಮನೆ ಗಂಡಸರು ಅಡಿಕೆಗೆ ಕೊಳೆ ಬಾರದಿರಲೆಂಬಂತೆ ಔಷಧಿಯನ್ನು ಹೊಡೆಯುವ ತಯಾರಿ ನಡೆಸುತ್ತಿರುತ್ತಾರೆ, ವಯಸ್ಸಾದವರು ತಮ್ಮದೆ ಲೋಕದಲ್ಲಿ , ಒಟ್ಟಿನಲ್ಲಿ ಎಲ್ಲರೂ ಎನೇನೊ ಮಾಡ್ತಾ ಇರ್ತಾರೆ ಆದರೆ ಹೆಂಗಸರು ಮಾತ್ರ ವರ್ಷವಿಡಿ ತಾವು ಕೂಡಿಟ್ಟ ಹಣ ಎಷ್ಟಾಗಿದೆ ಅಂತಾ ಎಣಿಸ್ತಾ ಇರ್ತಾರೆ. ಈ ಹಣವಾದರು ಸುಮ್ಮನೆ ಬಂದಿದ್ದಲ್ಲ, ತವರಿಂದ ಬಂದ ಅಣ್ಣ ಕೊಟ್ಟಿದ್ದೊ , ದೂರದೂರಲ್ಲಿ ಇರುವ ಮಗ ಮನೆಗೆ ಬಂದಾಗ ಕೊಟ್ಟಿ ಹೋಗಿದ್ದೊ ಅಥವಾ ಗಂಡನ ಬಟ್ಟೆ ಒಗೆಯುವಾಗ ಸಿಕ್ಕ ಚಿಲ್ಲರೆ ಕಾಸುಗಳು ಹಾಗು ಹಾಲು,ತುಪ್ಪಾ ಮಾರಿ ಉಳಿಸಿದಂತ ದುಡ್ಡು ಅದು.

ಹೆಂಗಸರ ಈ ಹರ ಸಾಹಸ ಯಾಕೆ ಅಂತೀರಾ , ಪ್ರತಿ ವರ್ಷ ಮಳೆಗಾಲದಲ್ಲಿ ನಮ್ಮೂರಲ್ಲಿ ಭಾರಿ ಡಿಸ್ಕೌಂಟ್ ಮಾರಾಟ ಇರುತ್ತೆ ಕಣ್ರಿ ...

ರೇಷ್ಮೆ ಸೀರೆಯಿಂದ ಹಿಡಿದು ಚಿಕ್ಕ ಚಿಕ್ಕ ಆದರೆ ಅತ್ಯವಶ್ಯಕ ಒಳ ಉಡುಪುಗಳವರೆಗೂ ಬಾರಿ ಡಿಸ್ಕೌಂಟ್ .. ಅಷ್ಟೆ ಅಲ್ಲ ಕರ್ಚೀಪ್ ಗೆ ಸಹ ಡಿಸ್ಕೌಂಟ್ ಕೊಡ್ತಾರೆ!!!!. ನಮ್ಮೂರ ಹೆಂಗಸ್ರಿಗೂ [ ಕೆಲವು ಗಂಡಸರು/ಮಕ್ಕಳಿಗು ಸಹ] ಅದೇನು ಡಿಸ್ಕೌಂಟ್ ಮೋಹನೊ , ಬೇಸಿಗೆಯಲ್ಲಿ ಮಗ/ಮಗಳು ಎನಾದರು ವಸ್ತ್ರ ಬೇಕು ಅಂತಾ ಹಟ ಮಾಡಿದ್ರೆ ,
" ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ" ಅನ್ನೋರೆ ಹೆಚ್ಚು.

ಯಾವತ್ತು ಮನೆಗೆ ಪೇಪರ್ ಬಂದಿದ್ಯ ಇಲ್ವ ಅಂತ ತಿಳಿಯುವ ಉಸಾಬರಿಗೆ ಹೋಗದ ಹೆಂಡ್ತಿ .. ಪದೆ ಪದೆ ಪೇಪರ್ ಬಗ್ಗೆ ಕೆಳ್ತಾ ಇದ್ರೆ ಗಂಡನ ಜೇಬಿಗೆ ಕತ್ರಿ ಬಿತ್ತು ಅಂತಾನೆ ಅರ್ಥ. ಪ್ರಾದೇಶಿಕ ಪೇಪರನಲ್ಲಿ ಯಾವ ಯಾವ ಅಂಗಡಿಯಲ್ಲಿ ಡಿಸ್ಕೌಂಟ ಮಾರಾಟ ಪ್ರಾರಂಭವಾಗಿದೆ ಅಂತ ಹಾಕಿರ್ತಾರೆ ಅದಕ್ಕೆ ಈ ಪರಿ ಕೇಳೊದು. ಮತ್ತೆ ಅಷ್ಟೂಂದು ದುಡ್ಡು ಕೂಡಿ ಹಾಕಿ ಗಂಡನ ಹತ್ರ ಯಾಕೆ ಕೇಳ್ತಾರೆ ಅಂತೀರ .. ಅದೆ ಕಣ್ರಿ ವಿಶೇಷ .. ಅವರು ಕೂಡಿಟ್ಟಿರೊದು ಗಂಡನಿಗೆ ಗೊತ್ತಿಲ್ಲದ ಹಾಗೆ, ಅಲ್ಲದೇ ಅದು ಸ್ಟಾಂಡ್ ಬೈ ಹಣ. ಗಂಡನಿಂದ ಪಡೆದ ಹಣ ಸಾಕಾಗದೆ ಇದ್ದಾಗ ಅಥವಾ ಕೇಳಿದರೆ ಮತ್ತೆ ಸಿಗೋಲ್ಲ ಅನ್ನುವಾಗ ಆ ಹಣ ಹೊರಗೆ ಬರೋದು.

ಪೇಟೆಗೆ ಹೋಗೊದು ಸುಮ್ನೆ ಆಗಲ್ಲ , ಬೆಳಿಗ್ಗೆ ಬೇಗನೆ ಎದ್ದು [ ದಿನಕ್ಕಿಂತ ಅರ್ಧ ಗಂಟೆ ಮುಂಚೆನೆ] , ಮನೆ ಕೆಲಸ ಮುಗ್ಸಿ..ತಿಂಡಿ ತಯಾರು ಮಾಡಿ, ವಯಸ್ಸಾದ ಅತ್ತೆ ಮಾವ ಇದ್ರೆ ಅಡಿಗೆನೂ ತಯಾರಿಸಿಟ್ಟು ,ಗಂಡನ ಮನವಲಿಸಿ ಸಾಧ್ಯ ಆದರೆ ಅವರನ್ನು ಕರೆದುಕೊಂಡು ಹೊರಡ ಬೇಕು ..ನೋಡಿ ಡಿಸ್ಕೌಂಟ್ ಗೆ ಹೊಗೋಕೆ ಎಷ್ಟೊಂದು ವಿಘ್ನ.

ಕೆಲವೊಮ್ಮೆ ಆಚೀಚೆ ಮನೆ ಹೆಂಗಸರೆಲ್ಲಾ ಸೇರಿ ಯಾವದಾದರು ಒಂದು ಜೀಪನ್ನು ಬಾಡಿಗೆಗೆ ಪಡೆದು ಒಟ್ಟಿಗೆ ಪೇಟೆಗೆ ಹೋಗಿ ಬರುವುದು ಇರುತ್ತೆ. ಕೆಲವೊಂದು ಮನೆಯಲ್ಲಿ ಇದಕ್ಕಾಗಿಯೆ ಸಣ್ಣ ಪುಟ್ಟ ಜಗಳವಾಗುವುದು ಇರುತ್ತದೆ. ಎಲ್ಲಾ ಗಂಡಸರು ಹೇಳುವ ಒಂದು ಸಾಮಾನ್ಯ ಮಾತು ಅಂದ್ರೆ " ಸುಮ್ನೆ ದುಡ್ಡು ಜಾಸ್ತಿ ಮಾಡಿ ಆಮೇಲೆ ಡಿಸ್ಕೌಂಟ ಅಂತ ಸ್ಟಿಕ್ಕರ್ ಅಂಟಿಸಿ ಮೋಸ ಮಾಡ್ತಾರೆ , ಅಲ್ಲದೆ ಅದೆಲ್ಲ ಹಳೆ ಶಿಲ್ಕು , ಖಾಲಿ ಮಾಡೊ ಪ್ಲಾನ ಅಷ್ಟೆ . ಅದರ ಬದಲು ನಿಧಾನವಾಗಿ ಆಮೇಲೆ ತಗೋಂಡ್ರೆ ಆಯಿತು ಅಂತ". ಆದರೆ ಹೆಂಗಸರು ಕೇಳ್ಬೇಕಲ್ವ . ಹೋಗ್ಬೇಕು ಅಂದ್ರೆ ಹೋಗ್ಲೆ ಬೇಕು.

ಆದರೆ ಡಿಸ್ಕೌಂಟನಲ್ಲಿ ಇರೋ ೭೦% ಬಟ್ಟೆ ಹಳೆ ಶಿಲ್ಕು ಅನ್ನೋದ್ರೆಲ್ಲಿ ಎರಡು ಮಾತಿಲ್ಲ. ಕೆಲವೊಬ್ಬರಿಗೆ ಒಳ್ಳೆ ಮಾಲು ಸಿಕ್ಕಿರುತ್ತೆ ಇನ್ನು ಕೆಲವೊಬ್ಬರಿಗೆ ಬಹಳ ಕೆಟ್ಟ ಮಾಲು ಸಿಗುವ ಸಾದ್ಯತೆಗಳು ಇರುತ್ತೆ , ಎಷ್ಟಪ್ಪ ಅಂದ್ರೆ ಒಮ್ಮೆ ನೀರಿಗೆ ಹಾಕಿದ್ರೆ ಮುಗಿತು ಮತ್ತೆ ಆ ವಸ್ತ್ರವನ್ನು ತೊಡೊ ಭಾಗ್ಯ ಗ್ಯಾಸ್ ಕಟ್ಟೆಗೊ , ಟಿ.ವಿ , ಪ್ರಿಡ್ಜಗಳಿಗೋ ಅಥವಾ ಕಿಡಕಿ ಬಾಗಿಲುಗಳಿಗೋ ಇರುತ್ತೆ :).

ಒಟ್ಟಿನಲ್ಲಿ ಮಳೆಯಲ್ಲಿ ನೆನೆಯುತ್ತ , ಮೈ ಎಲ್ಲ ಕೆಸರಾದರು ಸಹ ಮಳೆಗಾಲದಲ್ಲಿ ಒಮ್ಮೆ ಆದರು ಡಿಸ್ಕೌಂಟಗೆ ಅಂತ ಪೇಟೆಗೆ ಹೋಗಿ ಬರದಿದ್ದರೆ ನಮ್ಮ ಕಡೆಯವರಿಗೆ ಎನೋ ಒಂದನ್ನ ಕಳೆದು ಕೊಂಡಂತೆ. ಕೆಲವೊಂದು ಮಳೆಗಾಲದ ಖಾದ್ಯಗಳನ್ನಾದರು ಬಿಟ್ಟಾರು . ಈ ಡಿಸ್ಕೌಂಟ ಬಿಡಲೊಲ್ಲರು ....

ನಾವೇನು ಬೆಂಗಳೂರಲ್ಲಿ ಕಮ್ಮಿನೇ ..ಯಾವ ಮಾಲ್ ನಲ್ಲಿ ಎಷ್ಟು ರಿಯಾಯಿತಿ ಅಂತ ತಿಳಿದು ಕೊಂಡು ತಾನೆ ಲಗ್ಗೆ ಹಾಕೋದು. ನಾವು ಖರ್ಚು ಮಾಡುವಷ್ಟು ಸಹ
ಊರಲ್ಲಿ ಯಾರು ಮಾಡೋಲ್ಲ ಅಲ್ವ.ಬೆಂಗಳೂರನಲ್ಲಿ ವರ್ಷವಿಡಿ ಡಿಸ್ಕೌಂಟ್ ಜಾತ್ರೆನೆ. ಅವರಿಗೋ ವರ್ಷಕ್ಕೆ ಒಂದೊ ಎರಡೊ ಮಾತ್ರ .. ಹೋಗ್ಲಿ ಬಿಡಿ , ಮಜಾ ಮಾಡ್ಲಿ :)

ಈ ಡಿಸ್ಕೌಂಟ್ ವಿಷ್ಯ ಬರೆಯ ಹತ್ತಿದರೆ ಒಂದು ಪುಸ್ತಕಾನೆ ಬರಿ ಬಹುದು ಅಷ್ಟು ಸಂಗತಿಗಳು ನೋಡಲು , ಕೇಳಲು ಸಿಗುತ್ತದೆ. ನಾನು ಈಗ ಬರೆದಿದ್ದು ಕೇವಲ ಪೇಟೆಗೆ ಹೋಗೊ ಮುನ್ನ ಆಗುವಂತ ಘಟನೆಗಳನ್ನು ಮಾತ್ರ . ಇಲ್ಲಿ ಬರೆದಿರೋದು ಕಮ್ಮಿನೆ. ಡಿಸ್ಕೌಂಟ ಖರೀದಿ , ಆಮೇಲೆ ಮನೆಗೆ ಬಂದ ನಂತರ ಆಚಿಚೆ ಮನೆಯವರೋಡನೆ ಸಂಭಾಷಣೆ ಹೀಗೆ ಇನ್ನು ಹಲವು ಸ್ವಾರಸ್ಯಕರ ಘಟನೆಗಳು ಇರುತ್ತವೆ. ಎಂದಾದರು ಪುರುಸೊತ್ತಿನಲ್ಲಿ ಅದರೆ ಬಗ್ಗೆ ಬರೆಯುತ್ತೇನೆ.

ವಿ.ಸೂ: ಇದೊಂದು ಕೇವಲ ಲಘು ಬರಹವಷ್ಟೆ .. ಯಾವುದೆ ವ್ಯಕ್ತಿ , ಸ್ಥಳಗಳನ್ನು ನಿಂದಿಸಲು ಬರೆದದ್ದಲ್ಲ. ಅಥವ ನಮ್ಮೂರ ಜನ ಹೀಗೆ ಅಂತ ತೋರಿಸುವದಕ್ಕೂ ಬರೆದದ್ದಲ್ಲ.ಸುಮ್ಮನೆ ತಮಾಷೆಗೆ ಬರೆದದ್ದು ಓದಿ ತಮಾಷೆ ಅನ್ನಿಸಿದರೆ ನಕ್ಕು ಬಿಡಿ , ಕಮೆಂಟನಲ್ಲಿ ನಾಲ್ಕು ಹೋಗಳಿಕೆನೋ , ತೆಗಳಿಕೆನೋ ಎನೋ ಒಂದನ್ನ ಗೀಚಿ :).

ಚಿತ್ರ ಕೃಪೆ : ಅಂತರ್ಜಾಲ

Tuesday, July 6, 2010

ಆತ್ಮ ಶುದ್ಧಿ

ತುಂಬ ಬೇಸರವಾದಾಗ ಅಥವ ಮನಸ್ಸಿಗೆ ಎನೋ ಹೊಸತನ ಬೇಕೆನಿಸಿದಾಗ .. ನಾನು ಕೆಲವೊಮ್ಮೆ ಮೊರೆ ಹೋಗುವುದು ಕನ್ನಡ ಪುಸ್ತಕಗಳೆಡೆಗೆ .ಹಲವು ಬಾರಿ ಡಿ.ವಿ.ಜಿ ಯವರ ಕಗ್ಗಕ್ಕೆ. ಅದೆನೋ ಡಿ.ವಿ.ಜಿ ಯವರ ಕಗ್ಗ ಓದುವುದೆಂದರೆ ನನಗೆ ಭಲು ಇಷ್ಟ. ಒಂದು ಕಗ್ಗವನ್ನು ಓದಿ , ಅರ್ಥವನ್ನು ಕಲ್ಪಿಸಿಕೊಂಡು [ ಪ್ರತಿಯೊಂದು ಕಗ್ಗದ ಭವಾರ್ಥವಿರುವ ಪುಸ್ತಕ ಕೂಡ ಇದೆ ] , ಈಗಿನ ದಿನಕ್ಕೆ ಕಗ್ಗದ ಭಾವವನು ಹೊಂದಿಸಿ ಮುದ ಹೊಂದುತ್ತಿರುತ್ತೇನೆ. ಕಗ್ಗದ ಭಾವಗಳು ಚಿರಸತ್ಯ ಮತ್ತು ನಿತ್ಯ ಸ್ಮರಣೀಯ.

ಮೊನ್ನೆ ಹೀಗೊಂದು ಘಟನೆ ನಡೆಯಿತು. ಕೆಲಸದಿಂದ ಬರುವಾಗ ಎನೋ ಒಂದು ತರದ ಕಳವಳ. ಕೆಲಸದ ಒತ್ತಡದಿಂದ ಹೀಗಾಯ್ತೊ ಅಥವ ಮತ್ತೆನೋ ಕಾರಣವೊ ನನಗೆ ತಿಳಿಯದಾಗಿತ್ತು ... ಮನೆಗೆ ಬಂದು ಕೈ ಕಾಲು ಮುಖ ತೊಳೆದು ಹೆಂಡತಿ ಕೊಟ್ಟ ಬಿಸಿ ಬಿಸಿ ಚಹದೊಂದಿಗೆ ಊರಿನಿಂದ ತಂದ ಹಲಸಿನಕಾಯಿ ಸಂಡಿಗೆಯನ್ನು ಮುಗಿಸಿ , ಮಡದಿಯೊಂದಿಗೆ ಒಂದಿಷ್ಟು ಹೊತ್ತು ಹರಟೆ ಹೊಡೆದರು ಮನಸ್ಸಿಗೆ ಸಮಾಧಾನವಾಗಲಿಲ್ಲ.ನಿಜವೆಂದರೆ ಸರಿಯಾಗಿ ಮಾತನಾಡಲೂ ಇಲ್ಲ. ಸುಮ್ಮನೆ ಅತ್ತ ಇತ್ತ ತಿರುಗಾಡಿದೆ .. ಸ್ವಲ್ಪ ಹೊತ್ತು ಹಾಡು ಕೇಳಿದೆ .. ಉಹ್ಮ್ ..ಎನೂ ಪ್ರಯೋಜನ ಇಲ್ಲ .. ಹೆಂಡತಿ ಅಡಿಗೆ ತಯಾರಿ ನಡೆಸಿದ್ದಾಳೆ .. ಸುಮ್ಮನೆ ಅವಳನ್ನು ಕರೆಯೋದು ಬೇಡ ಅಂತಾ ನನ್ನ ಲ್ಯಾಪಟೊಪ್ ಒನ್ ಮಾಡಿ ಇಂಟೆರ್ನೆಟನಲ್ಲಿ ಬ್ಲೊಗ್ ಓದ ತೊಡಗಿದೆ, ಬ್ಲೊಗ್ ಓದಲೂ ಸಹ ಮನಸಾಗಲಿಲ್ಲ .. ಇಮೇಲ್ ನೋಡೋಣವೆಂದು ನನ್ನ ಜಿಮೇಲ್ ತಾಣಕ್ಕೆ ಹೋದೆ. ಅಲ್ಲಿ ಡಿವಿಜಿಯವರ ಕಗ್ಗವೊಂದನ್ನು ಮಿತ್ರ ಪೊಸ್ಟ್ ಮಾಡಿದ್ದ. ಕಗ್ಗವನ್ನು ಓದದೆ ಬಹಳ ದಿನವೇ ಆಗಿ ಹೋಗಿತ್ತು .. ಅದಲ್ಲದೆ ಬೇರೆ ಪುಸ್ತಕಗನ್ನೂ ಸಹ ಓದಿರಲಿಲ್ಲ [ಕೆಲಸದ ಡೊಕ್ಯುಮೆಂಟಗಳನ್ನು ಹೊರತು ಪಡಿಸಿ] , ನನ್ನ ಕನ್ನಡ ಕೃಷಿಗೂ ನೀರೆರೆದಿರಲಿಲ್ಲ , ಆ ಮಿಂಚಂಚೆಯನ್ನು ತೆಗೆದು ನೋಡಿದೆ .. ಈ ಕೆಳಗಿನ ಕಗ್ಗ ಅಲ್ಲಿತ್ತು ,

ಅಂತಾನು ಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನು ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||

ಅರ್ಥ ನಾನು ಕಲ್ಪಿಸಿದಂತೆ :
ಯಾವಾಗಾದರು , ಹೇಗಾದರು ಸರಿ . ನಿನ್ನ ಮಿತಿಯೊಳಗೆ ನಿನಗನಿಸಿದಂತೆ ,|
ಮನಸ್ಸಿಗೆ ಬೆಸರವಾದಾಗ , ಕಳವಳಗೊಂಡಾಗ, ಕೋಪಗೂಂಡಾಗ ನೀ ನಡೆ ಶಾಂತಿ , ನೆಮ್ಮದಿಯಡೆಗೆ.||
ಕೆರಳಿದಮನಕ್ಕೆ ಕೆಲವೊಮ್ಮೆ ಸಾಂತ್ವನವ ನೀಡು , ತಿಳಿಗೊಳಿಸು . ಕೆಲವೂಮ್ಮೆ ಮಗುವನ್ನು ದಾರಿ ತಪ್ಪದಂತೆ
ತಿದ್ದುವಂತೆ ಮನವನ್ನು ತಿದ್ದು , ಶಿಕ್ಷಿಸು |
ನಿನ್ನನ್ನು ನಿನ್ನ ಆತ್ಮವನ್ನು ತಿದ್ದುತಿರು , ಹೊಸತನವ ಕಲಿಸುತ್ತಿರು , ಎಂದೆಂದು ಉನ್ನತಿಯನ್ನು ಹೊಂದು||

ಅಂದರೆ .. ಏಷ್ಟೆ ಬೇಸರವಾಗಲಿ , ಕೋಪವೇ ಬಂದಿರಲಿ ಅದನ್ನು ಹಿಡಿದಿಟ್ಟು , ಬದಿಗೊತ್ತಿ ,ಮುನ್ನಡೆಯುವ ಸೂತ್ರ ನಿನ್ನ ಕೈಯಲ್ಲೆ ಇದೆ .. ಅದನ್ನು ಸೂಕ್ತವಾಗಿ ಬಳಸುವುದನ್ನು ಕಲಿ, ಸರಿಯಾದ ರೀತಿಯಲ್ಲಿ ಪಳಗಿಸುವುದನ್ನು ಅರಿತುಕೊ .. ನಿನ್ನ ಆತ್ಮೋದ್ದಾರಕ್ಕೆ ನೀನೆ ಹೋಣೆ , ಮರ್ಕಟ ಮನಸ್ಸನ್ನು ಹತೋಟಿಗೆ ತರುವ ದಾರಿಯನ್ನು ನೀನೆ ಕಲಿ ಎಂಬರ್ಥವನ್ನು ಡಿ.ವಿ.ಜಿ ಯವರು ಇಲ್ಲಿ ಹೇಳ ಭಯಸುತ್ತಿರ ಬಹುದೇ ಎಂದು ನನಗನಿಸಿತು. ಕಗ್ಗವನ್ನು ಸಂಪೂರ್ಣವಾಗಿ ಮತ್ತೂಮ್ಮೆ ಓದಿ .. ಮನಸ್ಸಿಗನಿಸಿದ ಅರ್ಥವನ್ನು ಬರೆದಿಟ್ಟುಕೊಂಡೆ .

ಮಿಂಚಂಚೆಯನ್ನು ಮುಚ್ಚಿ ಒಮ್ಮೆ ಜೋರಾಗಿ ಉಸಿರೆಳೆದು , ಬಾಗಿಲು ತೆರೆದು ಹೊರಗೆ ಬಂದು ನಿಂತೆ. ಕಪ್ಪು ಮೋಡ , ತುಂತುರು ಮಳೆಯಾಗುತ್ತಿತ್ತು, ಪಶ್ಚಿಮದ ಗಾಳಿ ಸ್ವಲ್ಪ ಜೋರಾಗಿಯೆ ಬರುತ್ತಿತ್ತು ಮೈ ಮನಸ್ಸಿಗೆ ಒಂದು ತರಹದ ಉಲ್ಲಾಸವಾಯಿತು. ಬೇಸರ ಮಾಯವಾದಂತೆ ಇತ್ತು. ಹೇಗಿದ್ದರು ವಾರಾಂತ್ಯ , ಜೊತೆಗೆ ಭಾರತ ಭಂದ್
ಸಾಧ್ಯತೆ ಇದೆ ಅಂದಮೇಲೆ ಮೂರು ದಿನದ ರಜೆ ಕಟ್ಟಿಟ್ಟಿದ್ದು . ಯಾವುದಾದರು ಪುಸ್ತಕ ಓದೆ ತೀರುವುದು ಎಂದು ನಿರ್ಧಾರ ಮಾಡಿದೆ. ಬರಿ ಕಥೆ , ಕಾದಂಬರಿಯೊಂದೆ ಅಲ್ಲ ,ಕೆಲಸಕ್ಕೆ ಸಂಬಂಧ ಪಟ್ಟ ಪುಸ್ತಕವಾದರು ಸರಿ , ಕನ್ನಡ , ಇಂಗ್ಲಿಷ ಯಾವುದಾದರು ಸರಿ ಒಟ್ಟಿನಲ್ಲಿ ಓದ ಬೇಕು ಅಷ್ಟೆ . ನಿರ್ಧಾರ ದೃಡವಾಗಿತ್ತು.ಕಪಾಟು ಹುಡುಕಿದಾಗ ಸಿಕ್ಕಿದ್ದು ಯಾವಾಗಲೊಮ್ಮೆ ಪುಸ್ತಕ ಮಳಿಗೆಗೆ ಹೋದಾಗ ತಂದ ಅಥವಾ ಮಿತ್ರರಿಂದ ಯೆರವಲು ಪಡೆದ ಕೆಲವು ಇನ್ನು ಓದಿರದ ಕನ್ನಡ ಪುಸ್ತಕಗಳು.ಓದಿರದ ಪುಸ್ತಕ ಕಂಡಾಗ ಬಿಡುವುದಾದರು ಹೇಗೆ , ಅಲ್ಲವೇ ಮತ್ತೆ .. !!!!

ನಾನೀಗ ಓದುತ್ತಿರುವ ಪುಸ್ತಕಗಳು ,
೧. ಚೇಳು -- ವಸುಧೇಂದ್ರ

೨. ಯುಗಾದಿ -- ವಸುಧೇಂದ್ರ


ವಿಸೂ: ಕಗ್ಗದ ಅರ್ಥ ಕೇವಲ ನನ್ನ ವಾಖ್ಯಾನ , ಬೇರೆಯ ರೀತಿಯಲ್ಲೂ ಅರ್ಥಗಳು ಇರಬಹುದು , ಎಕೆಂದರೆ ಕಗ್ಗದ ಮಹಿಮೆಯೆ ಅದು. ಹಾಗೇನಾದರು ಇದ್ದಲ್ಲಿ , ತಿಳಿದಲ್ಲಿ ದಯವಿಟ್ಟು ಕಮೆಂಟಿನಲ್ಲಿ ತಿಳಿಸಿ . ಎನಾದರು ತಪ್ಪಿದ್ದರೆ ತಿದ್ದಿ ...