
ಅಗಷ್ಟ ೧೫ ರ ಭಾಷಣ , ಧ್ವಜಾರೋಹಣ ಮತ್ತು ಒಂದಿಷ್ಟು ನೆನಪುಗಳು ,
=============
ಮಾನ್ಯ ಅಥಿತಿಗಳೇ, ಪುಜ್ಯ ಗುರುಗಳೇ , ಹಾಗೂ ನನ್ನ ಸಹ ಪಾಠಿಗಳೇ ,
"ಇಂದು ಆಗಷ್ಟ್ ೧೫ ,ಅಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ . ಇಂದಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಸರಿಯಾಗಿ ೪೭ ವರ್ಷಗಳು ಕಳೆದವು.
ಮಹತ್ಮಾ ಗಾಂಧಿ , ಚಾಚಾ ನೆಹರು , ಸುಭಾಶಚಂದ್ರ ಭೋಸ ಮುಂತಾದವರ ಪರಿಶ್ರಮದ ಫಲವಾಗಿ ಆಗಷ್ಟ್ ೧೫ , ೧೯೪೭ರಂದು ನಮಗೆ ಸ್ವತಂತ್ರ್ಯ ದೊರಕಿತು.
.........................
......................... "
ಇದು ನಾನು [ ನನ್ನಂತೆ ಇನ್ನು ಎಷ್ಟೊ ಜನ] ಪ್ರಾಥಮಿಕ ಶಾಲಾ ದಿನಗಳಲ್ಲಿ ಮಾಡಿದ ಭಾಷಣದ ತುಣುಕು. ಇವತ್ತು ಕೆಲ್ಸ ಜಾಸ್ತಿ ಇರ್ಲಿಲ್ಲ ಅದಿಕ್ಕೆ ಸುಮ್ನೆ ಆಗಷ್ಟ ೧೫ರ ಬಗ್ಗೆ ಲೇಖನಗಳನ್ನ ಓದ್ತಾ ಇದ್ದೆ , ಮನಸ್ಸು ಬಾಲ್ಯದ ಕಡೆಗೆ ಜಾರುತ್ತಿತ್ತು .ಹಳೆ ನೆನಪುಗಳೆ ಹಾಗೆ ಬೇಡದ ಸಮಯದಲ್ಲಿ ಬಂದು ಕಾಡುತ್ತವೆ.
ಮೂರನೇ ತರಗತಿಯಲ್ಲಿದ್ದಾಗ ನಾನು ಮಾಡಿದ ಭಾಷಣ , ಅದರ ತಯಾರಿ ಇನ್ನು ಕಣ್ಣಿಗೆ ಕಟ್ಟಿದಂತಿದೆ. ಅದು ನನ್ನ ಮೊದಲ ಸ್ಟೇಜ್ ಅನುಭವ . ಶಾಲೆಯಿಂದ ಬಂದ ತಕ್ಷಣ ಭಾಷಣ ಬರೆದು ಕೊಡು ಎಂದು ಅಕ್ಕನ ಬೆನ್ನು ಬಿದ್ದಿದ್ದೆ. ಅಂತು ಕಾಡಿ ಬೇಡಿ , ಅಮ್ಮನ ಹತ್ತಿರ ಹೇಳಿಸಿದ ಮೇಲೆ ಬರೆದುಕೊಟ್ಟಿದ್ದಳು. ಅದನ್ನು ಬಾಯಿಪಾಠ ಮಾಡುವಾಗ ಆದ ಖುಶಿ ಅಷ್ಟಿಷ್ಟಲ್ಲ.ಆದರೆ ಮರುದಿನ ಎಲ್ಲದುದಿರಿಗೆ ನಿಂತಾಗ ಮಾತ್ರ ಕಣ್ಣ ಮುಂದೆ ಕತ್ತಲೆ ಆವರಿಸಿ ಬಿಟ್ಟಿತ್ತು . ಸೇರಿರುವರ ಕಣ್ಣೆಲ್ಲಾ ನನ್ನ ಮೇಲೆ , ನನಗೆ ಏನು ನೆನಪಾಗುತ್ತಿಲ್ಲ. ಅಪ್ಪ ಹಿಂದಿನ ದಿನವೇ ಹೆಳಿದ್ದರು ಮರೆತರೆ ಹಾಳೇ ನೋಡಿ ಓದು ಅಂತ. ಅದನ್ನ ನೆನಪಿಸಿಕೊಂಡು ಒಮ್ಮೆ ಹಾಳೆಯತ್ತ ಕಣ್ಣಾಡಿಸಿ , ನಡುಗುವ ದನಿಯಲ್ಲಿ ಶುರು ಮಾಡಿದೆ , ಅದೆಲ್ಲಿಂದ ಬಂತೊ ಧೈರ್ಯ ಗೊತ್ತಿಲ್ಲ , " ಜೈ ಹಿಂದ " ಅನ್ನುವವರೆಗೆ ಸರಾಗವಾಗಿ ಭಾಷಣ ಮಾಡಿ ಮುಗಿಸಿದ್ದೆ . ಅದರ ನಂತರ ಏಷ್ಟೆಷ್ಟೋ ಭಾಷಣ , ಹಾಡು , ನಾಟಕ ಮಾಡಿದ್ದೆನೋ ಆದರೆ ಆ ಮೊದಲ ಅನುಭವ ಮಾತ್ರ ಅಚ್ಚಳಿಯದಂತೆ ಮನದ ಮೊಲೆಯಲ್ಲಿ ಸುಪ್ತ ಸ್ಥಿತಿಯಲ್ಲಿ ಇದೆ. ಈಗಲು ಅಷ್ಟೆ ಕೆಲವೊಮ್ಮೆ ಪ್ರೊಜೆಕ್ಟನಲ್ಲಿ ಪ್ರಸೆಂಟೇಶನ್ನ ಕೊಡಬೇಕು ಅಂದಾಗ ಆ ದಿನ ನೆನಪಿಗೆ ಬರುತ್ತದೆ. ಶಾಲೆಯಲ್ಲಿ ಧ್ವಜರೋಹಣದ ನಂತರ ಚಾಕಲೇಟ ತಿಂದು ,ಭಾಷಣ ಮಾಡಿ ಅಥವಾ ಕೇಳಿ , ಪ್ರಭಾತ ಪೇರಿಯನ್ನು ಮುಗಿಸಿ ಮನೆಗೆ ಬಂದರೆ , ಉಳಿದ ದಿನ ರಜೆಯೆ ಸರಿ.
ವಾಸ್ತವಸ್ಥಿತಿಗೆ ಬಂದಾಗ ಅನಿಸಿದ್ದೆಂದರೆ ನಾನು ಧ್ವಜಾರೋಹಣಕ್ಕೆ ಹೋಗಿ ವರುಷಗಳೆ ಸಂದಿದೆ ಎಂದು . ಶಾಲಾ ದಿನಗಳು ಮುಗಿದ ಮೇಲೆ ಯಾವುದೆ ಧ್ವಜರೋಹಣಕ್ಕೆ ಹೊದ ನೆನಪೆ ಇಲ್ಲ. ಇದು ನನ್ನ ಕಥೆ ಒಂದೆ ಅಲ್ಲ , ಎಷ್ಟೋ ಜನರು ಶಾಲಾ ದಿನಗಳ ನಂತರ ಪ್ರಾಯಶಃ ಆಗಷ್ಟ್ ೧೫ರಂದು ಧ್ವಜರೋಹಣಕ್ಕೆ ಹೋಗದಿರುತ್ತಾರೆ.ಕಾಲೇಜು ದಿನಗಳಲ್ಲಿ ರಜ ಬಂತೆಂದರೆ ಕ್ಯಾಂಪಸ್ ನ ಹತ್ತಿರವು ಸುಳಿಯುತ್ತಿರಲಿಲ್ಲ ಇನ್ನು ಧ್ವಜರೋಹಣ ದೂರದ ಮಾತಾಯಿತು. ಇನ್ನು ಕೆಲಸಕ್ಕೆ ಸೇರಿದ ಮೇಲಂತು,ಇದೆಲ್ಲ ಸಾದ್ಯವೇ ಆಗಲಿಲ್ಲ . ಧ್ವಜಾರೊಹಣವೋ ಇಲ್ಲಾ, ಭಾಷಣವೂ ಇಲ್ಲಾ , ರಜೆ ಇದೆ ಎಲ್ಲಿ ಸುತ್ತೊಕೆ ಹೊಗೋಣ ಅಂತ ತಯಾರಿ ನಡೆದಿರುತ್ತೆ. ಈ ಬಾರಿಯಾದರು ನಾನಿರುವಅಪಾರ್ಟಮೆಂಟಿನಲ್ಲಿ ಭಾವುಟ ಹಾರಿಸುವಾಗ ಹೋಗಲೇಬೇಕೆಂದುಕೊಂಡಿದ್ದೆನೆ. ಎನಾಗುತ್ತದೆ ನೋಡೊಣ. ನೀವು ಧ್ವಜಾರೋಹಣಕ್ಕೆ ಬನ್ನಿ.
ಇಷ್ಟು ಹೇಳಿ ನನ್ನ ಭಾಷಣವನ್ನು ಇಲ್ಲಿಗೆ ಮುಗಿಸುತ್ತೇನೆ ,
" ಜೈ ಹಿಂದ್ " ,
" ವಂದೇ ಮಾತರಂ "
ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು .