ಶುಕ್ರವಾರ ಬೆಳಿಗ್ಗೆ ೬ ಗಂಟೆಗೆ ನಮ್ಮ ಪ್ರಯಾಣ ಪ್ರಾರಂಭವಾಯಿತು. ಸರಿಯಾಗಿ ೮ ಗಂಟೆಗೆ ಚನ್ನಪಟ್ಟಣದ ಹತ್ತಿರ ಹೋಟೆಲ್ ಕದಂಬದಲ್ಲಿ ನಮ್ಮ ಬೆಳಗಿನ ಉಪಹಾರ. ಅದು ಸಿದ್ದಾಪುರ ಕಡೆಯವರ ಹೊಟೆಲ್. ಆ ಹೊಟೇಲ್ ಅಣ್ಣನ [ ಶಡ್ಕನನ್ನು ಹೀಗೆ ಕರೆಯುತ್ತೇನೆ] ಪರಿಚಯದವರದ್ದೆ ಅಂತೆ. ಬೆಳಿಗ್ಗೆ ಬೇಗ ಹೊರಟಿದ್ದರಿಂದ ಹೊಟ್ಟೆ ಒಂದೆ ಸಮನೆ ತಾಳ ಹಾಕುತ್ತಿತ್ತು. ಹೋಟೆಲನಲ್ಲಿ ಸಕತ್ತ್ ಬ್ಯಾಟಿಂಗ್ ಮಾಡಿದ್ದೆ ಮಾಡಿದ್ದು. ಮಸಾಲೆದೋಸೆ, ಇಡ್ಲಿ ವಡಾ , ಚಹಾದ ನಂತರ ನಮ್ಮ ಪ್ರಯಾಣ ಮುಂದುವರೆಯಿತು. ಮೈಸೂರ್, ಗುಂಡ್ಲುಪೇಟೆ ದಾಟುವರೆಗೆ ಎಲ್ಲಿಯೂ ಮಧ್ಯೆ ಕಾರ್ ನಿಲ್ಲಿಸಲಿಲ್ಲ. ಗುಂಡ್ಲುಪೇಟ್ ದಾಟುವ ಹೊತ್ತಿಗಾಗಲೆ ಸೂರ್ಯ ತನ್ನ ಕೆನ್ನಾಲಿಗೆಯನ್ನು ಚಾಚುತ್ತಿದ್ದ ಅದಕ್ಕೆ ಅಲ್ಲಿಯೆ ಒಂದು ಕಡೆ ಎಳನೀರಿನ ಸೇವನೆಯನ್ನು ಮುಗಿಸಿ ಅಲ್ಲಿಂದ ಮತ್ತೆ ಪಯಣ ವಯನಾಡ್ ಕಡೆಗೆ ಪ್ರಾರಂಭವಾಯಿತು. ಆಗಲೆ ಸಮಯ ೧೦.೩೦ ಕೇರಳ ಬಾರ್ಡರ್ ದಾಟಿಯಾಗಿದೆ ,ಇನ್ನು ವಯನಾಡ್ ತಲುಪುವವರೆಗೂ ಎಲ್ಲಿಯೂ ನಿಲ್ಲಿಸಿಬಾರದೆಂದು ತೀರ್ಮಾನಿಸುತ್ತಿದ್ದಂತೆಯೆ ಕಾರ್ ನಿಲ್ಲಿಸುವ ಪ್ರಸಂಗ ಎದುರಾಯಿತು ಏಕೆಂದರೆ ೪-೫ ಕಾಡಾನೆಗಳ ಗುಂಪೊಂದು ರಸ್ತೆ ದಾಟುತ್ತಿತ್ತು. ಈ ರಸ್ತೆಯಲ್ಲಿ ಪ್ರಾಣಿಗಳ ಸಂಚಾರ ಸರ್ವೆ ಸಾಮಾನ್ಯ , ಈ ಕುರಿತು ರಸ್ತೆಯ ಇಕ್ಕೆಲೆಗಳಲ್ಲು ಸೂಚನ ಫಲಕಗಳನ್ನು ಕಾಣಬಹುದು. ಆನೆಯನ್ನು ಕಾಣುತ್ತಿದ್ದಂತೆ ಉಳಿದವರಂತೆ ನಾವು ಕಾರನ್ನು ನಿಲ್ಲಿಸಿದೆವು. ನಾನು ಗಡಬಡೆಯಲ್ಲಿ ಇಳಿದು ಆನೆಯ ಫೋಟೊ ಕ್ಲಿಕ್ಕಿಸಲು ನನ್ನ ಹೊಚ್ಚ್ ಹೊಸ ಕ್ಯಾಮರಾ [Cannon PowerShot SX120 IS ] ಹಿಡಿದು ಓಡಿದೆ. ಹತ್ತಿರ ಹೋಗಿ ಕ್ಲಿಕ್ಕಿಸಬೇಕೆಂದು ಕೊಂಡಿದ್ದರು ಆನೆಗಳು ಮರ ಮುರಿಯುವ ಶಬ್ದಕ್ಕೆ ಹಾಗು ಸಾಗುತ್ತಿರುವ ವೇಗಕ್ಕೆ ಹೆದರಿಕೆಯಾಗಿ ಎಲ್ಲರು ದೂರದಿಂದಲೆ ಫೋಟೊ ತೆಗೆದುಕೊಂಡೆವು.
ಅಲ್ಲಿಂದ ಮುಂದೆ ನಾವು ಕೇರಳದ ಗಡಿಯಲ್ಲಿರುವ ಹಳ್ಳಿ , ಪೇಟೆಗಳನ್ನು ದಾಟುತ್ತ ಸುಲ್ತಾನ ಬತೇರಿ ಎಂಬ ಜಾಗಕ್ಕೆ ತಲುಪಿದೆವು. ಮೊದಲೆ ಎಲ್ಲೆಲ್ಲಿ ಹೋಗಬೇಕು ಎಂದು ಒಂದು ಪಟ್ಟಿ ಸಿದ್ದಪಡಿಸಿಕೊಂಡಿದ್ದೆವು. ಸುಲ್ತಾನ್ ಬತೇರಿ ಟಿಪ್ಪು ಸುಲ್ತಾನನ ಯುದ್ಧ ಸಾಮಗ್ರಿಗಳನ್ನು ಶೇಖರಿಸಿಡುವ ಸ್ಥಳವಾಗಿತ್ತಂತೆ. ಇಲ್ಲಿ ಒಂದು ಟಿಪ್ಪು ಸುಲ್ತಾನನ ಕೋಟೆಯಿದೆ ಎಂದು ನಮಗೆ ನಂತರ ತಿಳಿಯಿತು ಆದ್ದರಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಸುಲ್ತಾನ ಬತೇರಿಗೆ ಬರುತ್ತಿದ್ದಂತೆ ಮೊದಲಿಗೆ ಜೈನ್ ಟೆಂಪಲ್ ಗೆ ಹೋದೆವು.ಇಲ್ಲಿ ಶಿಥಿಲಗೊಂಡ ಒಂದು ಚಿಕ್ಕ ಬಸದಿಯಿದೆ. ಎದುರಿನ ಕಲ್ಲು ಮಂಟಪ ಶಿಥಿಲಗೊಂಡಿದ್ದರೂ ಆಕರ್ಷಣೀಯವಾಗಿದೆ.ಹೋಗುವ ದಾರಿಯಲ್ಲು ಚಿಕ್ಕ ಸುಂದರ ಹೂದೋಟವು ಇದೆ.
ನಮ್ಮ ಮುಂದಿನ ಸ್ಥಳ ಎಡಕಲ್ ಗುಹೆ. ಇದು ಹೆಸರಿಗೆ ಮಾತ್ರ ಗುಹೆ , ಆದರೆ ನಿಜವಾದ ಗುಹೆಯಲ್ಲ , ಎರಡು ದೊಡ್ದ ಕಲ್ಲು ಬಂಡೆಯ ಮೇಲೆ ಮತ್ತೊಂದು ಕಲ್ಲು ಬಿದ್ದು ಛಾವಣಿಯಂತೆ ಮುಚ್ಚಿ ಗುಹೆಯ ರೂಪವನ್ನು ಕೊಟ್ಟಿದೆ.
ಅಲ್ಲಿಗೆ ತಲುಪುವ ನಮ್ಮ ಹಾದಿ ಸುಲಭವಾಗಿರಲಿಲ್ಲ . ಅಂದರೆ ರಸ್ತೆ ಕೆಟ್ಟದ್ದಾಗಿತ್ತು ಅಂತಲ್ಲ , ಹೋಗುವ ದಾರಿ ಸ್ವಲ್ಪ ವ್ಯತ್ಯಾಸವಾಗಿ ತಲುಪುವುದು ಸ್ವಲ್ಪ ಕಷ್ಟವಾಯಿತು. ಮೊದಲೇ ಭಾಷೆ ಬರದ ಊರು. ಆದರು ತಿಳಿದ ಅರೆಬರೆ ತಮಿಳ್ , ಮಲಯಾಲಮ್ ಭಾಷೆ ಪ್ರಯೋಗಿಸಿ ಅಂತು ತಲುಪಿದೆವು. ಸಮಯ ಸರಿಯಾಗಿ ೧ ಗಂಟೆ. ಹೊಟ್ಟೆ ಮತ್ತೆ ತಾಳ ಹಾಕುತ್ತಿದೆ, ಹೊಟೇಲಗಳು ಇರುತ್ತವೆ ಎಂಬ ಹುಂಬತನದಿಂದ ಏನೂ ಕೊಂಡೊಯ್ದಿರಲಿಲ್ಲ. ಹೊಟೇಲ್ಗಳು ಇದ್ದವು ಆದರೆ ಎಲ್ಲ ಮೀನು ಮಾಂಸಮಯ. ನಾವೋ ಹೋದವರೆಲ್ಲ ಶಾಖಾಹಾರಿಗಳು, ಆದರು ಒಂದು ಚಿಕ್ಕ ಕಾಕಾ ಹೊಟೇಲದಂತಕ್ಕೆ ನುಗ್ಗಿ ಒಂದಿಷ್ಟು ಆಹಾರ ಹೊಟ್ಟೆಗೆ ಹಾಕಿದ ಮೇಲೆ ಹುರುಪು ಬಂತು.
ಎಡಕಲ್ ಗುಹೆಗೆ ಹೋಗಲು ಸ್ವಲ್ಪ ದೂರ ನಡೆಯಬೇಕಾಗುತ್ತದೆ. ಮಧ್ಯಾನದ ಉರಿ ಬಿಸಿಲು , ಬಿಸಿ ಗಾಳಿ, ಹೋಗುತ್ತಿರುವ ಜಾಗ ಬೆಟ್ಟ. ಕೇಳಬೇಕೆ? ಯಾರು ನಡೆಯಲು ತಯಾರಿಲ್ಲ. ಅಲ್ಲಿಯವರಿಗೂ ಗೊತ್ತು ಹೀಗೆಲ್ಲ ಆಗುತ್ತೆ ಅಂತ ಅದಕ್ಕೆ ಬೆಟ್ಟದ ಬುಡದವರೆಗೆ ಜೀಪೀನ ವ್ಯವಸ್ಥೆ ಮಾಡಿದ್ದಾರೆ. ಸರಿ ಜೀಪಿಗೆ ೭೦ ರೂಪಾಯಿಗಳನ್ನು ಕೊಟ್ಟು ಮೇಲಿನವರೆಗೆ ಹೋಗಾಯಿತು. ಅಲ್ಲಿಂದ ಗುಹೆಗೆ ಹೋಗಲು ಪ್ರವೇಶ ದರ ಕೊಟ್ಟು ಬೆಟ್ಟ ಹತ್ತಲು ಪ್ರಾರಂಭಿಸಿದೆವು.ದಾರಿ ಅಷ್ಟೊಂದು ಸುಗಮವಲ್ಲ, ಕೇಲವೆಡೆ ಮೇಲೇರಲು ಸಾಹಸವನ್ನೇ ಮಾಡಬೇಕಾಯಿತು. ಮೇಲಕ್ಕೆರುವವರೆಗೂ ಉರಿಬಿಸಿಲು , ಮೈಯೆಲ್ಲ ಒದ್ದೆಯಾಗಿತ್ತು. ಆದರೆ ಗುಹೆಯನ್ನು ಪ್ರವೇಷಿಸುತ್ತಿದ್ದಂತೆ ಅಲ್ಲಿಯ ತಂಪಾದ ವಾತಾವರಣ ಆಯಾಸವನ್ನು ಮರೆಮಾಚಿತ್ತು. ಒಳಗೆ ಗುಹೆಯ ಇಬ್ಬದಿಯಲ್ಲು ಆದಿಮಾನವರು ಕೆತ್ತಿದ ಚಿತ್ತಾರಗಳಿವೆ. ಪ್ರತಿಯೊಂದು ಕೆತ್ತನೆಯೂ ಪ್ರಾಣಿ , ಮನುಷ್ಯ ಹಾಗು ಕೆಲವು ಚಿನ್ಹೆಗಳಂತೆ ತೋರುತ್ತಿದ್ದವು.ಇವೆಲ್ಲವನ್ನು ಬರಿಯ ಕಣ್ಣಲ್ಲಿ ಸೆರೆ ಹಿಡಿದಿದ್ದು ಸಾಲದೆಂದು ಕ್ಯಾಮರಾದಲ್ಲೂ ಸೆರೆ ಹಿಡಿಯುವ ಕೆಲಸ ನನ್ನದಾಯಿತು.
ನಾವೆಲ್ಲ ಅಷ್ಟು ಕಷ್ಟಪಟ್ಟು ಮೇಲೆ ಹತ್ತುತ್ತಿದ್ದರೆ ಒಂದು ಮಂಗ ತನ್ನ ಮಗುವನ್ನೂ ಹೊತ್ತುಕೊಂಡು ಲೀಲಾಜಾಲವಾಗಿ, ಅದೂ ಬಂಡೆಯ ಅಡ್ಡ ಮಗ್ಗುಲಲ್ಲಿ ಸಾಗುತ್ತಿತ್ತು.
ಆದಿಮಾನವರು ಕೆತ್ತಿದ ಚಿತ್ರಗಳು
ಬೆಟ್ಟದ ಭಾಗವನ್ನು ಇನ್ನಷ್ಟು ಭೇಧಿಸಬೇಕೆಂಬ ಆಸೆ ಇದ್ದರು ನಮ್ಮ ಮುಂದಿನ ಜಾಗ ನಮ್ಮನ್ನು ಕೈ ಬೀಸಿ ಕರೆಯುತ್ತಿತ್ತು . ಪ್ರಕೃತಿಯ ಸೌಂದರ್ಯವನ್ನು ಸವಿಯಲು ನಾವು ಮೀನಮುಟ್ಟಿ ಜಲಪಾತಕ್ಕೆ ಹೊರಟೆವು.
(ಸಶೇಷ.. )