Thursday, December 23, 2010

ಸಂತಸದ ಕ್ಷಣ ...

ಬಡ್ತಿ ಸಿಕ್ಕಿತು ಎನಗೆ ನೀ ಮಡದಿಯಾಗೆ
ಕೈ ಹಿಡಿದೆ ನೀನು ಮನಕೆ ಸಂತಸ ತಂದೆ
ಮದುರ ಕ್ಷಣವದು ಬೆರೆತಂತೆ ಹಾಲು ಜೇನು
ತನುಮನದ ರೋಮಾಂಚನ ಅರಿಯದಾದೆನು

ಕಳೆದಿದೆ ವರುಷ ತುಂಬಿ ಮನೆಮನದಲ್ಲಿ ಹರುಷ

ಒಮ್ಮೆ ಕೇಳಿದ್ದೆ ನಿನಗೆ ಕೊಡುವೆಯೆನನ್ನು
ಮೊದಲ ವರ್ಷಕ್ಕೆ ಮರೆಯದ ಕೊಡುಗೆ ...
ನಗುತ ನೀ ಹೇಳಿದೆಯನಗೆ ಕರೆದೊಯ್ಯುವೆ
ಇನ್ನೊಂದು ಬಡ್ತಿಯೆಡೆಗೆ..

ಸಂತಸದ ಕ್ಷಣವಿದು ನಾಮರೆಯೆ ಎಂದು
ಮೀಸೆ ತಿರುವುತ ಹೇಳುತಿಹೆ
ಗಂಡು ಮಗುವಿನ ತಂದೆ ನಾನಿಂದು..

ಸುಖ ಶಾಂತಿ ಅಭಿವೃದ್ಧಿ ನಮ್ಮದಾಗಿರಲಿ
ಭಗವಂತನ ದಯೆ ಎಂದೆಂದು ಹೀಗೆ ಇರಲಿ !!!!!

ಸುಮಾರು ೩ ತಿಂಗಳಿನಿಂದ ಬ್ಲಾಗ್ ಲೋಕಕ್ಕೆ ಬಂದಿರಲಿಲ್ಲ. ಈಗ ಈ ಕುಶಿಯ ಕ್ಷಣವನ್ನು ನಿಮ್ಮೊಡನೆ ಹಂಚಿಕೂಳ್ಳಬೇಕೆನಿಸಿತು
ಅದಕ್ಕೆ ಸುಮ್ಮನೆ ಮನಸ್ಸಿಗೆ ಬಂದ ಶಬ್ದಗಳನ್ನು ಪ್ರಯೋಗಿಸಿ ಕುಶಿಯನ್ನು ಹಂಚಿಕೊಂಡಿದ್ದೇನೆ. ನಿಮ್ಮೆಲ್ಲರ ಹಾರೈಕೆ
ಆಶೀರ್ವಾದ ಸದಾ ನಮ್ಮೊಂದಿಗಿರಲಿ :).

ಸಂತಸದ ಕ್ಷಣವನ್ನು ಅನುಭವಿಸಲು ಮತ್ತೆ ಬ್ಲಾಗ ಲೋಕದಿಂದ ಸ್ವಲ್ಪ ದಿನ ದೂರವಾಗುತ್ತಿದ್ದೇನೆ.
ಮತ್ತಷ್ಟು ವಿಷಯಗಳೊಡನೆ ಮರಳಿ ಅಪ್ಪಳಿಸುವೆ .. ಅಲ್ಲಿವರೆಗೆ ..............



!!! ಹೊಸ ವರುಷದ ಶುಭಾಶಯಗಳು!!!

Sunday, September 5, 2010

ತೋಟದಲ್ಲೊಂದು ಸುತ್ತು

ಬಹಳ ತಿಂಗಳುಗಳ ನಂತರ ಬೇಸಿಗೆಯಲ್ಲಿ ಅಜ್ಜಿ ಮನೆಗೆ ಹೋಗಿದ್ದೆ ... ಮಾವನ ಮಗಳ ಮದುವೆ ಇತ್ತು .. ಒಂದು ದಿನ ಮೊದಲೇ ಹೋಗಿದ್ದರಿಂದ ಬಹಳ ನೆಂಟರು ಇನ್ನು ಬಂದಿರಲಿಲ್ಲ.. ಯಾಕೋ ಬಹಳ ಬೇಜಾರು ಬರುತ್ತಿತ್ತು ... ಅದಕ್ಕೆ ತೋಟಕ್ಕೆ, ಬೆಟ್ಟಕ್ಕೆ ಒಂದು ಸುತ್ತು ಹೋಗಿ ಬರೋಣವೆಂದು ನಾನು ಮತ್ತು ನನ್ನ ಕಸಿನ್ ಕ್ಯಾಮರಾ ಹಿಡಿದು ಹೊರಟೆವು ...

ಕೆಲವೊಂದು ಕ್ಲಿಕ್ಸ್ ಇಲ್ಲಿವೆ ....

ಕೂಗಿ ಕರೆದರೆನಗೆ ಕೋಕೊ ..
ಸಾಗಿ ಹೋದರು ನೀಡಿ ಕೊಕ್



ಕೋಕೊ ಕಾಯಿ ... ಮುಂಚೆ ಹಲವಾರು ತೋಟಗಳಲ್ಲಿ ಹೇರಳವಾಗಿ ಕಾಣುತ್ತಿದ್ದ ಇದು ಈಗ ಬಹಳ ವಿರಳವಾಗಿದೆ ... ಅಲ್ಲೊ ಇಲ್ಲೊ ಒಂದೆರಡು ಮನೆಯ ತೋಟಗಳಲ್ಲಿ ಕಂಡು ಬರುತ್ತದೆ ...ಮಾರ್ಕೆಟನಲ್ಲಿ ಇದರ ಬೇಡಿಕೆ ಕಮ್ಮಿ ಆಗಿದೆ ಮತ್ತು ಇದನ್ನು ಪ್ರೊಸೆಸ್ ಮಾಡಿ ಮಾರುವುದು ಕಷ್ಟ ಆದ್ದರಿಂದ ಬೆಳೆಯುತ್ತಿಲ್ಲ ಎಂದು ನನ್ನ ಮಾವನನ್ನು ಕೇಳಿದಾಗ ತಿಳಿಯಿತು ..





ಮರ ಅಣಬೆ ...

ನೆಲ ಬಿರಿದು ಮೇಲೆರಿ ,,,





ಕಾಫಿ ಹಣ್ಣು

ಈ ಹಣ್ಣು ನೋಡಲು ಕೆಂಪು,,
ಒಣಗಿಸಿದರೆ ನೀಡುವುದು ಕಂಪು ...
ಪುಡಿ ಮಾಡಿ ಕುಡಿದರೆ ..ಮನಸ್ಸಿಗೆ ತಂಪು ..





ನೀರ‍ ಗುಳ್ಳೆಯಲ್ಲವಿದು ... ಹೊಳೆವ ಮುತ್ತು ...
ತೇಲುತಿಹುದೆಲೆಯ ಮೇಲೆ .. ಇದು ಯಾರ ಸೊತ್ತು



ಎಳೆಯ ಮೈ ,, ಬಿರಿಬಿಸಿಲು ..
ಹೋಗದಿರಲೆನ್ನ ಉಸಿರು .,ಆಗ ಬೇಕಿದೆ ನಾನಿನ್ನು ಹಸಿರು ..



ಮೀಸೆಯನೆತ್ತಿ ,,



ಚುಂಬಿಸುವ ತವಕದಿ ಗಗನವ ,,,




ಯಾವುದೀ ಕಿರೀಟ



ಬಾಗಿದೆ ಎನ್ನ ಸೊಂಟ ,, ತುಂಬಿ ಹಲಸ , ಕಾಲಿಂದ ತಲೆ ಗುಂಟ ..



ರಸ್ತೆಯ ಬದಿಯಲ್ಲಿ ಕೂತು .. ತೋರುತಿಹುದೆನನ್ನು ಈ ಮರದ ತೂತು ,,,




ಸಾಗುತಾ ದೂರ ದೂರ ..

Thursday, August 26, 2010

ಅಪರೂಪದ ಫೋಟೊ

ಇದೊಂದು ಮಿಂಚಂಚೆಯಲ್ಲಿ ಬಂದ ಫೋಟೊ .. ಮೂಲ ಛಾಯಚಿತ್ರಕಾರ ಯಾರು ಎಂದು ತಿಳಿಯದು .. ಆದ್ದರಿಂದ all credit goes to original photographer ... ನಾನು ಕೇವಲ ಇದನ್ನು ಎಲ್ಲರೊಡನೆ ಹಂಚಿಕೂಳ್ಳ ಬೇಕೆನಿಸಿತು ಅದಿಕ್ಕೆ ಬ್ಲೊಗನಲ್ಲಿ ಹಾಕಿದ್ದೇನೆ ..



ಚಿತ್ರಕೃಪೆ :ಮಿಂಚಂಚೆ .. ಅಂತರ್ಜಾಲದಲ್ಲೂ ಸಹ ಇದೆ .. [ click on the photo to see it in large scale ]


ಇದರಲ್ಲಿ ಎಲ್ಲರನ್ನೂ ನಾನು ಗುರುತಿಸಲು ಆಗಲಿಲ್ಲ .. ಬಲ್ಲವರು ತಿಳಿಸುವೀರಾ ...

ಎಡದಿಂದ ಬಲ :

೧: ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ
೨. ಶ್ರೀ ವಿ ಕೃ ಗೋಕಾಕ್ ಅಥವಾ ಶ್ರೀ ಡಿ.ವಿ.ಗುಂಡಪ್ಪ
೩. ಶ್ರೀ ಕು.ವೆಂ.ಪು
೪. ಶ್ರೀ
೫. ಶ್ರೀ ಶಿವರಾಮ ಕಾರಂತ
೬. ಶ್ರೀ
೭. ಶ್ರೀ ಜಿ.ಪಿ.ರಾಜರತ್ನಮ್



[ ಈ ಛಾಯಾಚಿತ್ರದ ಹೆಚ್ಚಿನ ಮಾಹಿತಿಗಾಗಿ ಸುಶ್ರುತನ ಕಮೆಂಟ್ಸ ನೋಡಿ ...]

Monday, August 23, 2010

ಭೇಟಿ

ನಿನ್ನೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರೂ ತಮ್ಮ ಬ್ಲೊಗನಲ್ಲಿ ತಮ್ಮ ಅನುಭವಗಳನ್ನು ಬರೆದೆ ಬರೆಯುತ್ತಾರೆ.
ನಾನೇನು ಬೇರೆ ವಿಶೇಷವಾಗಿ ಬರೆಯುತ್ತಿಲ್ಲ ಬಿಡಿ. ಅದೆ ಸುದ್ದಿ ಆದರೆ ಅಪೂರ್ಣ , ಯಾಕಂತೀರ ... ಕಾರಣಾಂತರಗಳಿಂದ ನಾನು ಕಾರ್ಯಕ್ರಮವನ್ನು ಪೂರ್ಣ ನೋಡಲಾಗಲಿಲ್ಲ. ಮನೆಗೆ ನೆಂಟರು ಬಂದಿದ್ದರಿಂದ ಮಡದಿಯ ಕರೆಗೆ ಓಗೊಟ್ಟು ಮಧ್ಯದಲ್ಲೆ ಹೊರಡಬೇಕಾಯ್ತು. ಎಷ್ಟೊಂದು ಕಾರ್ಯಕ್ರಮಗಳು , ಮನರಂಜನೆಗಳು ..ತಪ್ಪಿದವೋ ನಾನರಿಯೆ .. ಇನ್ಯಾರಾದರು ತಮ್ಮ ಬ್ಲೊಗನಲ್ಲಿ ಸಂಪೂರ್ಣ ವರದಿಯನ್ನು ಹಾಕಿದರೆ ಅದನ್ನು ಓದಿ ಬೇಸರಿಸುವ ಸರದಿ ನನ್ನದು. ಆದರೂ ಅಲ್ಲಿ ಇದ್ದಷ್ಟೇ ಸಮಯ ಮಾತ್ರ ಮರೆಯಲಸಾಧ್ಯ.

ಕನ್ನಡ ಭವನ ಹೊಕ್ಕುತ್ತಿದ್ದಂತೆ ಮೊದಲಿಗೆ ಸಿಕ್ಕಿದವರು ಪ್ರಕಾಶಣ್ಣ. ಅವರೇ ನನ್ನನ್ನು ಕರೆದೊಯ್ದು ಸೀತಾರಮ ಸರ್ ಮತ್ತೆ ಸುಮನಾ ಮೇಡಮ್ ಪರಿಚಯಮಾಡಿ ಕೊಟ್ಟರು. ಅಷ್ಟರಲ್ಲೆ ಶಿವಪ್ರಕಾಶ ಕೈ ಮಿಲಾಯಿಸಿ ತಮ್ಮನ್ನು ಪರಿಚಯಿಸಿ ಕೊಂಡರು.ಹಾಗೆಯೆ ನಂಜುಂಡ , ಚೇತನಾ ಭಟ್ಟ ಅವರ ಪರಿಚಯವಾಯಿತು. ಪುಸ್ತಕ ಬಿಡುಗಡೆಯ ಈ ಸಮಯದಲ್ಲೇ ತಾವು ಭಾರತಕ್ಕೆ ಬಂದಿರುವುದು ತುಂಬ ಖುಷಿಯಾಗ್ತ ಇದೆ, ಎಲ್ಲರನ್ನು ಬೇಟಿ ಮಾಡುವ ಅವಕಾಶ ಸಿಕ್ತು ಅಂತ ನಂಜುಂಡರವರು ಹೇಳಿದರು.

ಆಮೇಲೆ ಒಂದಿಷ್ಟು ಹರೆಟೆ .. ಫೊಟೊ .. ಬಿಸಿ ಬಿಸಿ ಕಾಪಿ ...

ಅತ್ತಿತ್ತ ಸುತ್ತುತ್ತ ಪರಿಚಯದ ಮುಖಗಳನ್ನು ಹುಡುಕುತ್ತಿದ್ದಾಗ ಕಂಡಿದ್ದು ಪ್ರಗತಿ ಹೆಗಡೆ ಮತ್ತಿ ದಿಲೀಪ ಹೆಗಡೆ [ ನವ ದಂಪತಿಗಳು] ,ಮದುವೆಗೆ ಹೋಗಿರಲಿಲ್ಲ ಹಾಗಾಗಿ ಇಲ್ಲಿ ಬೇಟಿ ಮಾಡಿ ಶುಭ ಹಾರೈಸುವ ಸಂದರ್ಭ ಒದಗಿ ಬಂತು. ಇಷ್ಟೊತ್ತಾದರು ಕಾರ್ಯಕ್ರಮದ ಮುಖ್ಯ ಮುಖಗಳಾದ ಆಜಾದ ಸರ್ ಹಾಗೂ ಶಿವು ಸರ್ ಕಂಡು ಬರಲಿಲ್ಲ. ಛಲ ಬಿಡದೆ ಹುಡುಕಿ ಕೈ ಮಿಲಾಯಿಸಿ , ಶುಭಾಶಯಗಳನ್ನು ತಿಳಿಸಿ ಹೊರಬಂದರೆ ಎದುರಿಗೆ ಕಂಡಿದ್ದು ವಿ.ಆರ್ ಭಟ್ಟ ಸರ್ ..ಅವರೊಡನೆ ಸ್ವಲ್ಪ ಮಾತುಕಥೆ. ನಂತರ ನಾರಾಯಣ ಭಟ್ಟ , ನಾಗರಾಜ ,ನವೀನ , ಮಲ್ಲಿಕಾರ್ಜುನ ಮತ್ತೂ ಹಲವರ ಮುಖ ಬೇಟಿ ,ಪರಿಚಯವಾಯ್ತು.

ಕಾರ್ಯಕ್ರಮ ಪ್ರಾರಂಭವಾಗುವುದೆಂದು ಒಳಗೆ ಹೋದಾಗ ..ಮೂರ್ತಿ ಸರ್ ಮತ್ತು ನಾರಾಯಣ ಭಟ್ಟ ಅವರು ನನ್ನ ಪಕ್ಕದಲ್ಲೆ ಕುಳಿತರು. ಈ ಅವಕಾಶ ಬಿಡೋದೆ .. ನಾನೆ ಖುದ್ದಾಗಿ ಅವರನ್ನು ಮಾತನಾಡಿಸಿದೆ .. ಪರಿಚಯ ಹೇಳಿಕೊಂಡೆ.. ಮಾತನಾಡಿ ತುಂಬ ಖುಷಿಯಾಯ್ತು .. ಕೆಲವೊಂದು ಅನುಭವದ ಮಾತುಗಳನ್ನು ಹೇಳಿದರು. ಆಮೇಲೆ ದಿನಕರ ಮೊಗೇರ ಅವರನ್ನು ಬೇಟಿ ಮಾಡಲು ಮತ್ತೆ ಹೊರಗಡೆ ಹೋದೆವು. ಪತ್ನಿ ಸಮೇತರಾಗಿ ಆಗಮಿಸಿದ ದಿನಕರ ಅವರ ಬಳಿ ಸಾಗಿ ಕುಶಲೋಪಚರಿಗಳಾದ ಮೇಲೆ ನನ್ನ ಮತ್ತು ಭಟ್ಕಳದ ಬಾಂಧವ್ಯದ ನೆನಪುಗಳನ್ನು ಮಾತಾಡಿ ತಾಜಾ ಮಾಡಿಕೊಂಡೆ.

ಮತ್ತೆ ಒಳ ಬರುವಷ್ಟರಲ್ಲಿ ನಾವು ಮೊದಲು ಕುಳಿತ ಸ್ಥಳವನ್ನಾಗಲೇ ಬೇರೆಯವರು ಆಕ್ರಮಿಸಿದ್ದರು . ಸಭಾಂಗಣ ತುಂಬಿ ಹೋಗಿತ್ತು , ಜನಗಳು ಇನ್ನು ಬರುತ್ತಲೇ ಇದ್ದರು.ಅಲ್ಲೆ ಒಂದು ಸ್ಥಳ ಹುಡುಕಿ ಕುಳಿತೆ. ಎದುರಿಗೆ ಕಂಡಿದ್ದು ಸುಶ್ರುತ ಮತ್ತು ಗೌತಮ್ ..ಅವರನ್ನು ಮಾತನಾಡಿಸುವಷ್ಟರಲ್ಲಿ ಕಾರ್ಯಕ್ರಮ ಪ್ರಾರಂಭವಾಗಿತ್ತು ..ನನ್ನ ಕ್ಯಾಮರಾಕ್ಕೆ ಸ್ವಲ್ಪ ಕೆಲಸ ಕೊಡೋಣವೆಂದು ನಾನು ಸ್ಟೆಜ ಹತ್ತಿರ ಹೋದೆ .. ಅಲ್ಲಿ ಬಾಲು ಸರ್ ಮತ್ತು ಪ್ರವೀಣರವರ ಬೇಟಿ ಆಯಿತು.

ಒಂದೆರಡು ಫೊಟೊ ಕ್ಲಿಕ್ಕಿಸಿದೆ .. ವಾಣಿ ಕೂಗತೊಡಗಿತ್ತು ...ಮನೆಗೆ ಬರುವಂತೆ ಕರೆ ಬಂದಿತ್ತು ...ಇನ್ನು ಹಲವರನ್ನು ಬೇಟಿ ಮಾಡುವುದಿತ್ತು ... ಕಾರ್ಯಕ್ರಮವನ್ನು ಬಿಟ್ಟು ಮನೆಯ ಕಡೆ ಹೊರಟಿದ್ದೆ ... ಮುಂದಿನ ಬಾರಿ ಸ್ವಲ್ಪ ಸಮಯ ಇಟ್ಟು ಕೊಂಡು ಬಂದು ಎಲ್ಲರ ಪರಿಚಯ ಮಾಡಿಕೊಳ್ಳಬೇಕು.

ಹೊರಡುವ ಮುನ್ನ ಪುಸ್ತಕವನ್ನು ಕೊಳ್ಳುವುದನ್ನು ಮರೆಯಲಿಲ್ಲ. ಅಷ್ಟೆ ಅಲ್ಲ ಪ್ರವೀಣ ಅವರ ಸಹಾಯದಿಂದ ಲೇಖಕರ ಹಸ್ತಾಕ್ಷರ ಸಹ ಪಡೆದು ಕೊಂಡೆ ನಾನು ಹೊರ‍ಟಿದ್ದು.ಬಂದಿದ್ದಕ್ಕೆ ಇಷ್ಟಾದರು ಸಂತೋಷ ಪಡುವಂತಾಯಿತು.

ಫೊಟೊಗಳನ್ನು ಇನ್ನು ಕಂಪ್ಯೂಟರ್ ಗೆ ಟ್ರಾನ್ಸ್ಪರ ಮಾಡಲಾಗದ್ದರಿಂದ ಇಲ್ಲಿ ಹಾಕುತ್ತಿಲ್ಲ ,,ಸಾಧ್ಯವಾದಲ್ಲಿ ಇಂದು ಸಂಜೆಯೆ ಅಪ್ಲೋಡ್ ಮಾಡುತ್ತೇನೆ.

Friday, July 30, 2010

ಕನ್ನಡ ಜಾಗೃತಿಗೊಂದು ಪ್ರಯತ್ನ- ಅಂಗಡಿಯಲ್ಲಿ ಕನ್ನಡ ನುಡಿ.

ಇಂದು ಮಧ್ಯಾನ ಊಟ ಮುಗಿಸಿ ಬರುತ್ತಿರುವಾಗ ನನ್ನ ಮೇನೆಜರ್ "ಶ್ರೀಧರ ಇಲ್ಲಿ ಬನ್ರಿ , ನಿಮ್ಗೆನೋ ಕೊಡ್ಬೇಕು " ಅಂದ್ರು ..
ಅರೆ ಇದೆನಪ್ಪ .. ಎನಾದರು ಒಳ್ಳೆ ಸುದ್ದಿ ಇದ್ಯ ಅಂತ ಹೋದ್ರೆ ಒಂದು ಪುಸ್ತಕ ಕೈಗೆ ಹಿಡ್ಸಿದ್ರು ..
ಬರಿ ಪುಸ್ತಕಾನಾ ಅಂತ ನಿರಾಸೆ ಆಗಿಲ್ಲ ಯಾಕೆ ಗೊತ್ತ ಅವರು ಕೊಟ್ಟಿದ್ದು ಒಂದು ಕನ್ನಡದ ಪುಸ್ತಕ.

ಕೆಲಸದ ಮಧ್ಯೆಯೆ ಬಿಡುವು ಮಾಡಿಕೊಂಡು ಪುಸ್ಕವನ್ನು ಓದಿ ಮುಗಿಸಿದೆ ..ಇಷ್ಟವಾಯ್ತು .. ಎಲ್ಲರಿಗೂ ತಿಳಿಸೋಣ ಅನ್ನಿಸ್ತು ..
ಕೆಲವರಿಗೆ ಇದರ ಬಗ್ಗೆ ಈಗಾಗಲೇ ತಿಳಿದಿರಬಹುದು ..

ಪುಸ್ತಕ ವಿವರಣೆ ಹೀಗಿದೆ ..

ಹೆಸರು: ಅಂಗಡಿಯಲ್ಲಿ ಕನ್ನಡ ನುಡಿ ..
ಬರೆದವರು: ರೋಹಿತ್ ಬಿ ಆರ್
ಪ್ರಕಾಶನ ಮತ್ತು ಹಕ್ಕುಗಳು: ಬನವಾಸಿ ಬಳಗ , ಟಾಟಾ ಸಿಲ್ಕ್ ಫಾರ್ಮ್ , ಬೆಂಗಳೂರು.
ಪುಟಗಳು:೫೬

ಹೇಸರೆ ಹೆಳುವಂತೆ ಈ ಪುಸ್ತಕ ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿಗತಿಗಳ ಬಗ್ಗೆ ತಿಳಿಸಿತ್ತದೆ .. ಜೊತೆಗೆ ಪರಿಹಾರವು ಇದೆ ..

ಮುನ್ನುಡಿಯಲ್ಲಿ ಹೇಳಿರುವಂತೆ ಕನ್ನಡಿಗರಲ್ಲಿ ತುರ್ತಾಗಿ ಜಾಗೃತಿ ಆಗಬೇಕಾದ ಕ್ಷೇತ್ರಗಳತ್ತ ಕಣ್ಣು ಹಾಯಿಸಿದರೆ ಕಾಣಿಸುತ್ತಿರುವುದು ಮಾರುಕಟ್ಟೆಯಲ್ಲಿ ಗ್ರಾಹಕರ ಸೇವೆಯಲ್ಲಿನ ಕನ್ನಡದ ಬಳಕೆಯ ಕುಂದುಕೊರತೆಗಳು.

ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈ ಹೊತ್ತಿಗೆ ಸಹಾಯವಾಣಿಯಾಗಿ ಕೆಲಸ ಮಾಡುತ್ತದೆ. ಇಲ್ಲಿ ಹೊತ್ತಿಗೆಯಲ್ಲಿ ಅದಿಲ್ಲ , ಇದಿಲ್ಲ ಎಂದು ಗೋಳಿಡುವ ವಿಚಾರಗಳು ಇಲ್ಲ .. ಇವರು ಹೇಳುವುದು ಎನೇಂದರೆ ನಮ್ಮ ನಾಡಿನಲ್ಲೇ ನಮ್ಮ ಹಕ್ಕುಗಳಿಂದ ಕನಡಿಗರನ್ನು ಹೇಗೆ ವಂಚಿಸಲಾಗಿತ್ತಿದೆ ಎಂದು. ಕೆಲವು ವ್ಯಂಗ ಚಿತ್ರಗಳ ಮೂಲಕ , ಲಘು ಬರಹಗಳ ಮೂಲಕ ವಿಷಯವನ್ನು ಪ್ರಸ್ತುತ ಪಡಿಸಿದ್ದಾರೆ.
ನಮ್ಮ ನಾಡಿನಲ್ಲಿ ಅದು ಸಿಗುತ್ತಿಲ್ಲ , ಇದು ಸಿಗುತ್ತಿಲ್ಲ ಎಂದು ಅಲವತ್ತು ಕೊಳ್ಳುವುದರ ಬದಲು ಮಾರುಕಟ್ಟೆಯಲ್ಲಿ , ನಮ್ಮ ದೈನಂದಿನ ವ್ಯವಹಾರದಲ್ಲಿ ಕನ್ನಡದ ಹಕ್ಕೊತ್ತಾಯಕ್ಕೆ ಮುಂದಾಗೋಣ ಎನ್ನುವುದು ಇಲ್ಲಿನ ಧ್ಯೇಯವಾಗಿದೆ.
ಎಲ್ಲವು ಕನ್ನಡವೇ ಆಗಬೇಕೆಂದಲ್ಲ .. ಮುಖ್ಯವಾಗಿ ತಿಳಿಸುತ್ತಿರುವುದು ಸಾಮಾನ್ಯವಾದ ವಿಷಯಗಳಲ್ಲಿ .. ವ್ಯವಹಾರದಲ್ಲಿ ಕನ್ನಡವಿರಲಿ ಎಂಬುದು ಈ ಹೊತ್ತಿಗೆಯ ಉದ್ದೇಶವಾಗಿದೆ ..


ಕೆಲವು ಉದಾಹರಣೆಗಳು :
-- ಸೂಚನೆ ಹಾಗು ಸುರಕ್ಷತಾ ಮಾಹಿತಿಗಳು ಕನ್ನಡದಲ್ಲಿರಲಿ .. [ ಆಸ್ಪತ್ರೆ ಸೂಚೆನೆಗಳು , ತರೆವಾರಿ ದೈನಂದಿನ ಬಳಕೆಯ ವಸ್ತುಗಳು , ಅಡಿಗೆ ಅನಿಲ್ , ರೈಲ್ವೆ ಸೂಚನೆ ..ಸಾರಿಗೆ ಸೂಚನೆ.. ಹೀಗೆ ಹಲವು ಕಡೆ ಕನ್ನಡದ ಮಾಹಿತಿ ಸಾಮಾನ್ಯರಿಗೆ ಅಗತ್ಯ]
-- ಸಂಚಾರಿ ವ್ಯವಸ್ಥೆಯಲ್ಲಿ , ದೊಡ್ಡ ದಿನಸಿ ಸಂಕೀರ್ಣಗಳಲ್ಲಿ ದಿನಸಿ ಪದಾರ್ಥಗಳ ಹೆಸರು .. ಮಾಲ್ ಗಳಲ್ಲಿ ..ಚಿತ್ರ ಮಂದಿರದಲ್ಲಿ ಹೀಗೆ ಅನೇಕ ಕಡೆ ಕನ್ನಡದ ಅಗತ್ಯವಿದೆ ಎಂಬುದನ್ನ ಇಲ್ಲಿ ಚೆನ್ನಾಗಿ ವಿವರಿಸಲಾಗಿದೆ ..

ಕರ್ನಾಟಕದಲ್ಲಿ ಬರಿ ಕನ್ನಡಬಲ್ಲ ಒಬ್ಬ ಸಾಮಾನ್ಯ ಕನ್ನಡಿಗನೂ ವ್ಯಾಪಾರ ವಹಿವಾಟು ಸಲೀಸಾಗಿ ಪೂರೈಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಹೇಳಲಾಗಿದೆ ..

ಪುಸ್ತಕದ ಕೊನೆಯಲ್ಲಿ ಬರೆದಿರುವ ಆಶಯ ವಾಖ್ಯ ಇಷ್ಟವಾಯ್ತು ,,

" ಈ ಹೊತ್ತಿಗೆ ಬದಲಾವಣೆಯೆಡೆಗೆ ಹೆಜ್ಜೆಗಳನ್ನಿಡಲು ದೀವಿಗೆಯಾಗಲಿ ಎನ್ನುವುದು ಬಳಗದ ಆಶಯ.
ಓದಿರಿ , ಜಾರಿಗೆ ತನ್ನಿ ,ಬದಲಾವಣೆಗೆ ಕಾರಣರಾಗಿ "

ನನ್ನ ಅನಿಸಿಕೆ ಎನೆಂದರೆ .. ನಿಜ ಹಲವು ಕಡೆ ಕನ್ನಡದ ಪರಿಸ್ಥಿತಿ ಚಿಂತಾಜನಕವಾಗಿದೆ ಹಾಗಂತ ಎಲ್ಲವನ್ನು ಬದಲಾಯಿಸುವುದು ಸಾಧ್ಯವಿಲ್ಲ ... ಪುಸ್ತಕದಲ್ಲಿ ಹೇಳಿರುವ ಎಲ್ಲ ವಿಷಯ , ಸ್ಥಳಗಳಲ್ಲಿ ಅಲ್ಲವಾದರು ..ಕೆಲವು ಕಡೆ ಕನ್ನಡ ಜಾಗೃತಿಯನ್ನು ಮೂಡುಸುವುದು ಅವಶ್ಯವಾಗಿದೆ. ಎಲ್ಲರೂ ಧ್ವನಿಗೂಡಿಸಿದರೆ ಇದು ಖಂಡಿತ ಸಾಧ್ಯ.

ಕೈಗೂಡಿಸ ಬಯಸುವುದಾದರೆ ಇಲ್ಲಿಗೆ ಬರೆಯಿರಿ ..
" jaagruta_graahakaru-subscribe@googlegroups.com "

ಹಲವರು ದೇಣಿಗೆ ನೀಡುವ ಮೂಲಕ ಹೊತ್ತಿಗೆ ಅಚ್ಚು ಹಾಕಿಸಲು ನೆರವಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಶ್ರೀ ಆನಂದ .ಜಿ ಅವರು ಮುನ್ನುಡಿಯಲ್ಲಿ ತಿಳಿಸಿದ್ದಾರೆ.[ anand@banavaasibalaga.org]

ಈ ಪುಸ್ತಕ , ಪುಸ್ತಕ ಮಳಿಗೆಗಳಲ್ಲಿ ಸಿಗವುದು ಇಲ್ಲವೋ ಎಂಬ ಮಾಹಿತಿ ಖಚಿತವಿಲ್ಲ ..
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಸಂಪರ್ಕಿಸ ಬಹುದೇನೊ

www.banavaasibalaga.org

kacheri@banavasibalaga.org

ಬಳಗದ ಬ್ಲೋಗ್
enguru.blogspot.com
karnatique.blogspot.com

ಮಾಹಿತಿಗಾಗಿ : http://enguru.blogspot.com/2010/05/angadiyalli-kannada-nudi.html

ಕನ್ನಡದ ಏಳಿಗೆಗಾಗಿ ನನ್ನದೂ ಒಂದು ಚಿಕ್ಕ ಪ್ರಯತ್ನವಷ್ಟೇ ... ಪುಸ್ತಕವನ್ನು ಪಡೆದು ಓದಿ .. ನಾವು ಸಹಕರಿಸೋಣ ..ಎನಂತೀರಿ ...

Monday, July 26, 2010

ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ



ಮಳೆಗಾಲ ಬಂತೆಂದರೆ ನಮ್ಮೂರಲ್ಲಿ , ಊರಿನ ಸುತ್ತಮುತ್ತ ಎಲ್ಲರೂ ಒಂದೊಂದು ರೀತಿಯ ಚಟುವಟಿಕೆಗಳಲ್ಲಿ ತೊಡಗಿ ಬಿಡುತ್ತಾರೆ. ಮಕ್ಕಳಿಗೆ ಶಾಲೆಗೆ ಹೋಗೊ ತಯಾರಿ, ಆಳುಗಳಿಗೆ ತೋಟ ಗದ್ದೆಯ ಕೆಲಸ, ತೋಟ ಇರುವವರ ಮನೆ ಗಂಡಸರು ಅಡಿಕೆಗೆ ಕೊಳೆ ಬಾರದಿರಲೆಂಬಂತೆ ಔಷಧಿಯನ್ನು ಹೊಡೆಯುವ ತಯಾರಿ ನಡೆಸುತ್ತಿರುತ್ತಾರೆ, ವಯಸ್ಸಾದವರು ತಮ್ಮದೆ ಲೋಕದಲ್ಲಿ , ಒಟ್ಟಿನಲ್ಲಿ ಎಲ್ಲರೂ ಎನೇನೊ ಮಾಡ್ತಾ ಇರ್ತಾರೆ ಆದರೆ ಹೆಂಗಸರು ಮಾತ್ರ ವರ್ಷವಿಡಿ ತಾವು ಕೂಡಿಟ್ಟ ಹಣ ಎಷ್ಟಾಗಿದೆ ಅಂತಾ ಎಣಿಸ್ತಾ ಇರ್ತಾರೆ. ಈ ಹಣವಾದರು ಸುಮ್ಮನೆ ಬಂದಿದ್ದಲ್ಲ, ತವರಿಂದ ಬಂದ ಅಣ್ಣ ಕೊಟ್ಟಿದ್ದೊ , ದೂರದೂರಲ್ಲಿ ಇರುವ ಮಗ ಮನೆಗೆ ಬಂದಾಗ ಕೊಟ್ಟಿ ಹೋಗಿದ್ದೊ ಅಥವಾ ಗಂಡನ ಬಟ್ಟೆ ಒಗೆಯುವಾಗ ಸಿಕ್ಕ ಚಿಲ್ಲರೆ ಕಾಸುಗಳು ಹಾಗು ಹಾಲು,ತುಪ್ಪಾ ಮಾರಿ ಉಳಿಸಿದಂತ ದುಡ್ಡು ಅದು.

ಹೆಂಗಸರ ಈ ಹರ ಸಾಹಸ ಯಾಕೆ ಅಂತೀರಾ , ಪ್ರತಿ ವರ್ಷ ಮಳೆಗಾಲದಲ್ಲಿ ನಮ್ಮೂರಲ್ಲಿ ಭಾರಿ ಡಿಸ್ಕೌಂಟ್ ಮಾರಾಟ ಇರುತ್ತೆ ಕಣ್ರಿ ...

ರೇಷ್ಮೆ ಸೀರೆಯಿಂದ ಹಿಡಿದು ಚಿಕ್ಕ ಚಿಕ್ಕ ಆದರೆ ಅತ್ಯವಶ್ಯಕ ಒಳ ಉಡುಪುಗಳವರೆಗೂ ಬಾರಿ ಡಿಸ್ಕೌಂಟ್ .. ಅಷ್ಟೆ ಅಲ್ಲ ಕರ್ಚೀಪ್ ಗೆ ಸಹ ಡಿಸ್ಕೌಂಟ್ ಕೊಡ್ತಾರೆ!!!!. ನಮ್ಮೂರ ಹೆಂಗಸ್ರಿಗೂ [ ಕೆಲವು ಗಂಡಸರು/ಮಕ್ಕಳಿಗು ಸಹ] ಅದೇನು ಡಿಸ್ಕೌಂಟ್ ಮೋಹನೊ , ಬೇಸಿಗೆಯಲ್ಲಿ ಮಗ/ಮಗಳು ಎನಾದರು ವಸ್ತ್ರ ಬೇಕು ಅಂತಾ ಹಟ ಮಾಡಿದ್ರೆ ,
" ಸ್ವಲ್ಪ ತಡಕೊಳ್ಳಿ , ಡಿಸ್ಕೌಂಟ್ ನಲ್ಲಿ ಕೊಡ್ಸ್ತಿನಿ" ಅನ್ನೋರೆ ಹೆಚ್ಚು.

ಯಾವತ್ತು ಮನೆಗೆ ಪೇಪರ್ ಬಂದಿದ್ಯ ಇಲ್ವ ಅಂತ ತಿಳಿಯುವ ಉಸಾಬರಿಗೆ ಹೋಗದ ಹೆಂಡ್ತಿ .. ಪದೆ ಪದೆ ಪೇಪರ್ ಬಗ್ಗೆ ಕೆಳ್ತಾ ಇದ್ರೆ ಗಂಡನ ಜೇಬಿಗೆ ಕತ್ರಿ ಬಿತ್ತು ಅಂತಾನೆ ಅರ್ಥ. ಪ್ರಾದೇಶಿಕ ಪೇಪರನಲ್ಲಿ ಯಾವ ಯಾವ ಅಂಗಡಿಯಲ್ಲಿ ಡಿಸ್ಕೌಂಟ ಮಾರಾಟ ಪ್ರಾರಂಭವಾಗಿದೆ ಅಂತ ಹಾಕಿರ್ತಾರೆ ಅದಕ್ಕೆ ಈ ಪರಿ ಕೇಳೊದು. ಮತ್ತೆ ಅಷ್ಟೂಂದು ದುಡ್ಡು ಕೂಡಿ ಹಾಕಿ ಗಂಡನ ಹತ್ರ ಯಾಕೆ ಕೇಳ್ತಾರೆ ಅಂತೀರ .. ಅದೆ ಕಣ್ರಿ ವಿಶೇಷ .. ಅವರು ಕೂಡಿಟ್ಟಿರೊದು ಗಂಡನಿಗೆ ಗೊತ್ತಿಲ್ಲದ ಹಾಗೆ, ಅಲ್ಲದೇ ಅದು ಸ್ಟಾಂಡ್ ಬೈ ಹಣ. ಗಂಡನಿಂದ ಪಡೆದ ಹಣ ಸಾಕಾಗದೆ ಇದ್ದಾಗ ಅಥವಾ ಕೇಳಿದರೆ ಮತ್ತೆ ಸಿಗೋಲ್ಲ ಅನ್ನುವಾಗ ಆ ಹಣ ಹೊರಗೆ ಬರೋದು.

ಪೇಟೆಗೆ ಹೋಗೊದು ಸುಮ್ನೆ ಆಗಲ್ಲ , ಬೆಳಿಗ್ಗೆ ಬೇಗನೆ ಎದ್ದು [ ದಿನಕ್ಕಿಂತ ಅರ್ಧ ಗಂಟೆ ಮುಂಚೆನೆ] , ಮನೆ ಕೆಲಸ ಮುಗ್ಸಿ..ತಿಂಡಿ ತಯಾರು ಮಾಡಿ, ವಯಸ್ಸಾದ ಅತ್ತೆ ಮಾವ ಇದ್ರೆ ಅಡಿಗೆನೂ ತಯಾರಿಸಿಟ್ಟು ,ಗಂಡನ ಮನವಲಿಸಿ ಸಾಧ್ಯ ಆದರೆ ಅವರನ್ನು ಕರೆದುಕೊಂಡು ಹೊರಡ ಬೇಕು ..ನೋಡಿ ಡಿಸ್ಕೌಂಟ್ ಗೆ ಹೊಗೋಕೆ ಎಷ್ಟೊಂದು ವಿಘ್ನ.

ಕೆಲವೊಮ್ಮೆ ಆಚೀಚೆ ಮನೆ ಹೆಂಗಸರೆಲ್ಲಾ ಸೇರಿ ಯಾವದಾದರು ಒಂದು ಜೀಪನ್ನು ಬಾಡಿಗೆಗೆ ಪಡೆದು ಒಟ್ಟಿಗೆ ಪೇಟೆಗೆ ಹೋಗಿ ಬರುವುದು ಇರುತ್ತೆ. ಕೆಲವೊಂದು ಮನೆಯಲ್ಲಿ ಇದಕ್ಕಾಗಿಯೆ ಸಣ್ಣ ಪುಟ್ಟ ಜಗಳವಾಗುವುದು ಇರುತ್ತದೆ. ಎಲ್ಲಾ ಗಂಡಸರು ಹೇಳುವ ಒಂದು ಸಾಮಾನ್ಯ ಮಾತು ಅಂದ್ರೆ " ಸುಮ್ನೆ ದುಡ್ಡು ಜಾಸ್ತಿ ಮಾಡಿ ಆಮೇಲೆ ಡಿಸ್ಕೌಂಟ ಅಂತ ಸ್ಟಿಕ್ಕರ್ ಅಂಟಿಸಿ ಮೋಸ ಮಾಡ್ತಾರೆ , ಅಲ್ಲದೆ ಅದೆಲ್ಲ ಹಳೆ ಶಿಲ್ಕು , ಖಾಲಿ ಮಾಡೊ ಪ್ಲಾನ ಅಷ್ಟೆ . ಅದರ ಬದಲು ನಿಧಾನವಾಗಿ ಆಮೇಲೆ ತಗೋಂಡ್ರೆ ಆಯಿತು ಅಂತ". ಆದರೆ ಹೆಂಗಸರು ಕೇಳ್ಬೇಕಲ್ವ . ಹೋಗ್ಬೇಕು ಅಂದ್ರೆ ಹೋಗ್ಲೆ ಬೇಕು.

ಆದರೆ ಡಿಸ್ಕೌಂಟನಲ್ಲಿ ಇರೋ ೭೦% ಬಟ್ಟೆ ಹಳೆ ಶಿಲ್ಕು ಅನ್ನೋದ್ರೆಲ್ಲಿ ಎರಡು ಮಾತಿಲ್ಲ. ಕೆಲವೊಬ್ಬರಿಗೆ ಒಳ್ಳೆ ಮಾಲು ಸಿಕ್ಕಿರುತ್ತೆ ಇನ್ನು ಕೆಲವೊಬ್ಬರಿಗೆ ಬಹಳ ಕೆಟ್ಟ ಮಾಲು ಸಿಗುವ ಸಾದ್ಯತೆಗಳು ಇರುತ್ತೆ , ಎಷ್ಟಪ್ಪ ಅಂದ್ರೆ ಒಮ್ಮೆ ನೀರಿಗೆ ಹಾಕಿದ್ರೆ ಮುಗಿತು ಮತ್ತೆ ಆ ವಸ್ತ್ರವನ್ನು ತೊಡೊ ಭಾಗ್ಯ ಗ್ಯಾಸ್ ಕಟ್ಟೆಗೊ , ಟಿ.ವಿ , ಪ್ರಿಡ್ಜಗಳಿಗೋ ಅಥವಾ ಕಿಡಕಿ ಬಾಗಿಲುಗಳಿಗೋ ಇರುತ್ತೆ :).

ಒಟ್ಟಿನಲ್ಲಿ ಮಳೆಯಲ್ಲಿ ನೆನೆಯುತ್ತ , ಮೈ ಎಲ್ಲ ಕೆಸರಾದರು ಸಹ ಮಳೆಗಾಲದಲ್ಲಿ ಒಮ್ಮೆ ಆದರು ಡಿಸ್ಕೌಂಟಗೆ ಅಂತ ಪೇಟೆಗೆ ಹೋಗಿ ಬರದಿದ್ದರೆ ನಮ್ಮ ಕಡೆಯವರಿಗೆ ಎನೋ ಒಂದನ್ನ ಕಳೆದು ಕೊಂಡಂತೆ. ಕೆಲವೊಂದು ಮಳೆಗಾಲದ ಖಾದ್ಯಗಳನ್ನಾದರು ಬಿಟ್ಟಾರು . ಈ ಡಿಸ್ಕೌಂಟ ಬಿಡಲೊಲ್ಲರು ....

ನಾವೇನು ಬೆಂಗಳೂರಲ್ಲಿ ಕಮ್ಮಿನೇ ..ಯಾವ ಮಾಲ್ ನಲ್ಲಿ ಎಷ್ಟು ರಿಯಾಯಿತಿ ಅಂತ ತಿಳಿದು ಕೊಂಡು ತಾನೆ ಲಗ್ಗೆ ಹಾಕೋದು. ನಾವು ಖರ್ಚು ಮಾಡುವಷ್ಟು ಸಹ
ಊರಲ್ಲಿ ಯಾರು ಮಾಡೋಲ್ಲ ಅಲ್ವ.ಬೆಂಗಳೂರನಲ್ಲಿ ವರ್ಷವಿಡಿ ಡಿಸ್ಕೌಂಟ್ ಜಾತ್ರೆನೆ. ಅವರಿಗೋ ವರ್ಷಕ್ಕೆ ಒಂದೊ ಎರಡೊ ಮಾತ್ರ .. ಹೋಗ್ಲಿ ಬಿಡಿ , ಮಜಾ ಮಾಡ್ಲಿ :)

ಈ ಡಿಸ್ಕೌಂಟ್ ವಿಷ್ಯ ಬರೆಯ ಹತ್ತಿದರೆ ಒಂದು ಪುಸ್ತಕಾನೆ ಬರಿ ಬಹುದು ಅಷ್ಟು ಸಂಗತಿಗಳು ನೋಡಲು , ಕೇಳಲು ಸಿಗುತ್ತದೆ. ನಾನು ಈಗ ಬರೆದಿದ್ದು ಕೇವಲ ಪೇಟೆಗೆ ಹೋಗೊ ಮುನ್ನ ಆಗುವಂತ ಘಟನೆಗಳನ್ನು ಮಾತ್ರ . ಇಲ್ಲಿ ಬರೆದಿರೋದು ಕಮ್ಮಿನೆ. ಡಿಸ್ಕೌಂಟ ಖರೀದಿ , ಆಮೇಲೆ ಮನೆಗೆ ಬಂದ ನಂತರ ಆಚಿಚೆ ಮನೆಯವರೋಡನೆ ಸಂಭಾಷಣೆ ಹೀಗೆ ಇನ್ನು ಹಲವು ಸ್ವಾರಸ್ಯಕರ ಘಟನೆಗಳು ಇರುತ್ತವೆ. ಎಂದಾದರು ಪುರುಸೊತ್ತಿನಲ್ಲಿ ಅದರೆ ಬಗ್ಗೆ ಬರೆಯುತ್ತೇನೆ.

ವಿ.ಸೂ: ಇದೊಂದು ಕೇವಲ ಲಘು ಬರಹವಷ್ಟೆ .. ಯಾವುದೆ ವ್ಯಕ್ತಿ , ಸ್ಥಳಗಳನ್ನು ನಿಂದಿಸಲು ಬರೆದದ್ದಲ್ಲ. ಅಥವ ನಮ್ಮೂರ ಜನ ಹೀಗೆ ಅಂತ ತೋರಿಸುವದಕ್ಕೂ ಬರೆದದ್ದಲ್ಲ.ಸುಮ್ಮನೆ ತಮಾಷೆಗೆ ಬರೆದದ್ದು ಓದಿ ತಮಾಷೆ ಅನ್ನಿಸಿದರೆ ನಕ್ಕು ಬಿಡಿ , ಕಮೆಂಟನಲ್ಲಿ ನಾಲ್ಕು ಹೋಗಳಿಕೆನೋ , ತೆಗಳಿಕೆನೋ ಎನೋ ಒಂದನ್ನ ಗೀಚಿ :).

ಚಿತ್ರ ಕೃಪೆ : ಅಂತರ್ಜಾಲ

Tuesday, July 6, 2010

ಆತ್ಮ ಶುದ್ಧಿ

ತುಂಬ ಬೇಸರವಾದಾಗ ಅಥವ ಮನಸ್ಸಿಗೆ ಎನೋ ಹೊಸತನ ಬೇಕೆನಿಸಿದಾಗ .. ನಾನು ಕೆಲವೊಮ್ಮೆ ಮೊರೆ ಹೋಗುವುದು ಕನ್ನಡ ಪುಸ್ತಕಗಳೆಡೆಗೆ .ಹಲವು ಬಾರಿ ಡಿ.ವಿ.ಜಿ ಯವರ ಕಗ್ಗಕ್ಕೆ. ಅದೆನೋ ಡಿ.ವಿ.ಜಿ ಯವರ ಕಗ್ಗ ಓದುವುದೆಂದರೆ ನನಗೆ ಭಲು ಇಷ್ಟ. ಒಂದು ಕಗ್ಗವನ್ನು ಓದಿ , ಅರ್ಥವನ್ನು ಕಲ್ಪಿಸಿಕೊಂಡು [ ಪ್ರತಿಯೊಂದು ಕಗ್ಗದ ಭವಾರ್ಥವಿರುವ ಪುಸ್ತಕ ಕೂಡ ಇದೆ ] , ಈಗಿನ ದಿನಕ್ಕೆ ಕಗ್ಗದ ಭಾವವನು ಹೊಂದಿಸಿ ಮುದ ಹೊಂದುತ್ತಿರುತ್ತೇನೆ. ಕಗ್ಗದ ಭಾವಗಳು ಚಿರಸತ್ಯ ಮತ್ತು ನಿತ್ಯ ಸ್ಮರಣೀಯ.

ಮೊನ್ನೆ ಹೀಗೊಂದು ಘಟನೆ ನಡೆಯಿತು. ಕೆಲಸದಿಂದ ಬರುವಾಗ ಎನೋ ಒಂದು ತರದ ಕಳವಳ. ಕೆಲಸದ ಒತ್ತಡದಿಂದ ಹೀಗಾಯ್ತೊ ಅಥವ ಮತ್ತೆನೋ ಕಾರಣವೊ ನನಗೆ ತಿಳಿಯದಾಗಿತ್ತು ... ಮನೆಗೆ ಬಂದು ಕೈ ಕಾಲು ಮುಖ ತೊಳೆದು ಹೆಂಡತಿ ಕೊಟ್ಟ ಬಿಸಿ ಬಿಸಿ ಚಹದೊಂದಿಗೆ ಊರಿನಿಂದ ತಂದ ಹಲಸಿನಕಾಯಿ ಸಂಡಿಗೆಯನ್ನು ಮುಗಿಸಿ , ಮಡದಿಯೊಂದಿಗೆ ಒಂದಿಷ್ಟು ಹೊತ್ತು ಹರಟೆ ಹೊಡೆದರು ಮನಸ್ಸಿಗೆ ಸಮಾಧಾನವಾಗಲಿಲ್ಲ.ನಿಜವೆಂದರೆ ಸರಿಯಾಗಿ ಮಾತನಾಡಲೂ ಇಲ್ಲ. ಸುಮ್ಮನೆ ಅತ್ತ ಇತ್ತ ತಿರುಗಾಡಿದೆ .. ಸ್ವಲ್ಪ ಹೊತ್ತು ಹಾಡು ಕೇಳಿದೆ .. ಉಹ್ಮ್ ..ಎನೂ ಪ್ರಯೋಜನ ಇಲ್ಲ .. ಹೆಂಡತಿ ಅಡಿಗೆ ತಯಾರಿ ನಡೆಸಿದ್ದಾಳೆ .. ಸುಮ್ಮನೆ ಅವಳನ್ನು ಕರೆಯೋದು ಬೇಡ ಅಂತಾ ನನ್ನ ಲ್ಯಾಪಟೊಪ್ ಒನ್ ಮಾಡಿ ಇಂಟೆರ್ನೆಟನಲ್ಲಿ ಬ್ಲೊಗ್ ಓದ ತೊಡಗಿದೆ, ಬ್ಲೊಗ್ ಓದಲೂ ಸಹ ಮನಸಾಗಲಿಲ್ಲ .. ಇಮೇಲ್ ನೋಡೋಣವೆಂದು ನನ್ನ ಜಿಮೇಲ್ ತಾಣಕ್ಕೆ ಹೋದೆ. ಅಲ್ಲಿ ಡಿವಿಜಿಯವರ ಕಗ್ಗವೊಂದನ್ನು ಮಿತ್ರ ಪೊಸ್ಟ್ ಮಾಡಿದ್ದ. ಕಗ್ಗವನ್ನು ಓದದೆ ಬಹಳ ದಿನವೇ ಆಗಿ ಹೋಗಿತ್ತು .. ಅದಲ್ಲದೆ ಬೇರೆ ಪುಸ್ತಕಗನ್ನೂ ಸಹ ಓದಿರಲಿಲ್ಲ [ಕೆಲಸದ ಡೊಕ್ಯುಮೆಂಟಗಳನ್ನು ಹೊರತು ಪಡಿಸಿ] , ನನ್ನ ಕನ್ನಡ ಕೃಷಿಗೂ ನೀರೆರೆದಿರಲಿಲ್ಲ , ಆ ಮಿಂಚಂಚೆಯನ್ನು ತೆಗೆದು ನೋಡಿದೆ .. ಈ ಕೆಳಗಿನ ಕಗ್ಗ ಅಲ್ಲಿತ್ತು ,

ಅಂತಾನು ಮಿಂತಾನುಮೆಂತೊ ನಿನಗಾದಂತೆ |
ಶಾಂತಿಯನು ನೀನರಸು ಮನ ಕೆರಳಿದಂದು ||
ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |
ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||

ಅರ್ಥ ನಾನು ಕಲ್ಪಿಸಿದಂತೆ :
ಯಾವಾಗಾದರು , ಹೇಗಾದರು ಸರಿ . ನಿನ್ನ ಮಿತಿಯೊಳಗೆ ನಿನಗನಿಸಿದಂತೆ ,|
ಮನಸ್ಸಿಗೆ ಬೆಸರವಾದಾಗ , ಕಳವಳಗೊಂಡಾಗ, ಕೋಪಗೂಂಡಾಗ ನೀ ನಡೆ ಶಾಂತಿ , ನೆಮ್ಮದಿಯಡೆಗೆ.||
ಕೆರಳಿದಮನಕ್ಕೆ ಕೆಲವೊಮ್ಮೆ ಸಾಂತ್ವನವ ನೀಡು , ತಿಳಿಗೊಳಿಸು . ಕೆಲವೂಮ್ಮೆ ಮಗುವನ್ನು ದಾರಿ ತಪ್ಪದಂತೆ
ತಿದ್ದುವಂತೆ ಮನವನ್ನು ತಿದ್ದು , ಶಿಕ್ಷಿಸು |
ನಿನ್ನನ್ನು ನಿನ್ನ ಆತ್ಮವನ್ನು ತಿದ್ದುತಿರು , ಹೊಸತನವ ಕಲಿಸುತ್ತಿರು , ಎಂದೆಂದು ಉನ್ನತಿಯನ್ನು ಹೊಂದು||

ಅಂದರೆ .. ಏಷ್ಟೆ ಬೇಸರವಾಗಲಿ , ಕೋಪವೇ ಬಂದಿರಲಿ ಅದನ್ನು ಹಿಡಿದಿಟ್ಟು , ಬದಿಗೊತ್ತಿ ,ಮುನ್ನಡೆಯುವ ಸೂತ್ರ ನಿನ್ನ ಕೈಯಲ್ಲೆ ಇದೆ .. ಅದನ್ನು ಸೂಕ್ತವಾಗಿ ಬಳಸುವುದನ್ನು ಕಲಿ, ಸರಿಯಾದ ರೀತಿಯಲ್ಲಿ ಪಳಗಿಸುವುದನ್ನು ಅರಿತುಕೊ .. ನಿನ್ನ ಆತ್ಮೋದ್ದಾರಕ್ಕೆ ನೀನೆ ಹೋಣೆ , ಮರ್ಕಟ ಮನಸ್ಸನ್ನು ಹತೋಟಿಗೆ ತರುವ ದಾರಿಯನ್ನು ನೀನೆ ಕಲಿ ಎಂಬರ್ಥವನ್ನು ಡಿ.ವಿ.ಜಿ ಯವರು ಇಲ್ಲಿ ಹೇಳ ಭಯಸುತ್ತಿರ ಬಹುದೇ ಎಂದು ನನಗನಿಸಿತು. ಕಗ್ಗವನ್ನು ಸಂಪೂರ್ಣವಾಗಿ ಮತ್ತೂಮ್ಮೆ ಓದಿ .. ಮನಸ್ಸಿಗನಿಸಿದ ಅರ್ಥವನ್ನು ಬರೆದಿಟ್ಟುಕೊಂಡೆ .

ಮಿಂಚಂಚೆಯನ್ನು ಮುಚ್ಚಿ ಒಮ್ಮೆ ಜೋರಾಗಿ ಉಸಿರೆಳೆದು , ಬಾಗಿಲು ತೆರೆದು ಹೊರಗೆ ಬಂದು ನಿಂತೆ. ಕಪ್ಪು ಮೋಡ , ತುಂತುರು ಮಳೆಯಾಗುತ್ತಿತ್ತು, ಪಶ್ಚಿಮದ ಗಾಳಿ ಸ್ವಲ್ಪ ಜೋರಾಗಿಯೆ ಬರುತ್ತಿತ್ತು ಮೈ ಮನಸ್ಸಿಗೆ ಒಂದು ತರಹದ ಉಲ್ಲಾಸವಾಯಿತು. ಬೇಸರ ಮಾಯವಾದಂತೆ ಇತ್ತು. ಹೇಗಿದ್ದರು ವಾರಾಂತ್ಯ , ಜೊತೆಗೆ ಭಾರತ ಭಂದ್
ಸಾಧ್ಯತೆ ಇದೆ ಅಂದಮೇಲೆ ಮೂರು ದಿನದ ರಜೆ ಕಟ್ಟಿಟ್ಟಿದ್ದು . ಯಾವುದಾದರು ಪುಸ್ತಕ ಓದೆ ತೀರುವುದು ಎಂದು ನಿರ್ಧಾರ ಮಾಡಿದೆ. ಬರಿ ಕಥೆ , ಕಾದಂಬರಿಯೊಂದೆ ಅಲ್ಲ ,ಕೆಲಸಕ್ಕೆ ಸಂಬಂಧ ಪಟ್ಟ ಪುಸ್ತಕವಾದರು ಸರಿ , ಕನ್ನಡ , ಇಂಗ್ಲಿಷ ಯಾವುದಾದರು ಸರಿ ಒಟ್ಟಿನಲ್ಲಿ ಓದ ಬೇಕು ಅಷ್ಟೆ . ನಿರ್ಧಾರ ದೃಡವಾಗಿತ್ತು.ಕಪಾಟು ಹುಡುಕಿದಾಗ ಸಿಕ್ಕಿದ್ದು ಯಾವಾಗಲೊಮ್ಮೆ ಪುಸ್ತಕ ಮಳಿಗೆಗೆ ಹೋದಾಗ ತಂದ ಅಥವಾ ಮಿತ್ರರಿಂದ ಯೆರವಲು ಪಡೆದ ಕೆಲವು ಇನ್ನು ಓದಿರದ ಕನ್ನಡ ಪುಸ್ತಕಗಳು.ಓದಿರದ ಪುಸ್ತಕ ಕಂಡಾಗ ಬಿಡುವುದಾದರು ಹೇಗೆ , ಅಲ್ಲವೇ ಮತ್ತೆ .. !!!!

ನಾನೀಗ ಓದುತ್ತಿರುವ ಪುಸ್ತಕಗಳು ,
೧. ಚೇಳು -- ವಸುಧೇಂದ್ರ

೨. ಯುಗಾದಿ -- ವಸುಧೇಂದ್ರ


ವಿಸೂ: ಕಗ್ಗದ ಅರ್ಥ ಕೇವಲ ನನ್ನ ವಾಖ್ಯಾನ , ಬೇರೆಯ ರೀತಿಯಲ್ಲೂ ಅರ್ಥಗಳು ಇರಬಹುದು , ಎಕೆಂದರೆ ಕಗ್ಗದ ಮಹಿಮೆಯೆ ಅದು. ಹಾಗೇನಾದರು ಇದ್ದಲ್ಲಿ , ತಿಳಿದಲ್ಲಿ ದಯವಿಟ್ಟು ಕಮೆಂಟಿನಲ್ಲಿ ತಿಳಿಸಿ . ಎನಾದರು ತಪ್ಪಿದ್ದರೆ ತಿದ್ದಿ ...